ಆಶ್ರಯ ನಿವೇಶನ ಹಂಚಿಕೆ ವಿಳಂಬ ಖಂಡಿಸಿ ಬ್ಯಾಡಗಿ ಪುರಸಭೆ ಎದುರು ಪ್ರತಿಭಟನೆ

KannadaprabhaNewsNetwork |  
Published : Jun 23, 2026, 02:15 AM IST
ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ನಿವೇಶನ ವಂಚಿತ ಫಲಾನುಭವಿಗಳು ಬ್ಯಾಡಗಿ ಪುರಸಭೆ ಆಶ್ರಯ ಸಮಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಆಶ್ರಯ ನಿವೇಶನ ಹಂಚಿಕೆ ವಿಳಂಬ ನೀತಿ ಖಂಡಿಸಿ ಹಾಗೂ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ನಿವೇಶನ ವಂಚಿತ ಫಲಾನುಭವಿಗಳು ಪುರಸಭೆ ಆಶ್ರಯ ಸಮಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಆಶ್ರಯ ನಿವೇಶನ ಹಂಚಿಕೆ ವಿಳಂಬ ನೀತಿ ಖಂಡಿಸಿ ಹಾಗೂ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ನಿವೇಶನ ವಂಚಿತ ಫಲಾನುಭವಿಗಳು ಪುರಸಭೆ ಆಶ್ರಯ ಸಮಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಆಶ್ರಯ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ನಿವೇಶನ ಹಂಚಿಕೆ ಮಾಡುವ ಕೆಲಸ ಬಿಟ್ಟು ಆಶ್ರಯ ಸಮಿತಿ ಅವರು ಬೇರೆಲ್ಲ ಕೆಲಸ ಮಾಡಿದ್ದಾರೆ, ದಶಕದ ಹಿಂದೆ ತೆಗೆದುಕೊಂಡು ಜಾಗವನ್ನು ಆವತ್ತೆ ಹಂಚಿಕೆ ಮಾಡಿದ್ದಲ್ಲಿ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅಂದು, ಕೇವಲ 800 ಅರ್ಜಿಗಳಿದ್ದವು, ಅದರಲ್ಲಿ 400 ಜನರಿಗೆ ನಿವೇಶನ ಕೊಟ್ಟಿದ್ದಲ್ಲಿ ಯಾವುದೇ ಗೊಂದಲ ಆಗುತ್ತಿರಲಿಲ್ಲ, ಇದೀಗ 3 ಸಾವಿರ ಅರ್ಜಿಗಳಿವೆ, ಎಲ್ಲರಿಗೂ ಸೂರು ಕೊಡುವುದು ಅಸಾಧ್ಯದ ಮಾತು, ಅಲ್ಲದೇ ಈ ಹಿಂದೆಯೂ ಆಯ್ಕೆಯಲ್ಲಿ ತಪ್ಪು ಮಾಡಿದ್ದೀರಿ, ಈಗ ಬಿಟ್ಟಿರುವ ತಾತ್ಕಾಲಿಕ ಪಟ್ಟಿಯಲ್ಲಿಯೂ ನಿವೇಶನ, ಮನೆ ಇದ್ದವರಿಗೆ ಮತ್ತೆ ಹಂಚಿಕೆ ಮಾಡಲು ಮುಂದಾಗಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.ಕಾರ್ನರ್ ಸೈಟ್‌ಗಳನ್ನು ಹರಾಜು ಮಾಡಬೇಡಿ:ಪರೀದಾಬಾನು ನದಿಮುಲ್ಲಾ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬಡ ಕುಟುಂಬಗಳು ಆಶ್ರಯ ನಿವೇಶನಕ್ಕಾಗಿ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುತ್ತಿವೆ. ಚುನಾವಣೆ ಬಂದಾಗ ಮಾತ್ರ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ಸಮಸ್ಯೆಯನ್ನು ಮರೆತುಬಿಡುತ್ತಾರೆ. ಆಶ್ರಯ ಬಡಾವಣೆಯಲ್ಲಿರುವ 70ಕ್ಕೂ ಹೆಚ್ಚು ಕಾರ್ನರ್ ಸೈಟ್‌ಗಳನ್ನು ಹರಾಜು ಮಾಡುವ ಬದಲು ಅವುಗಳನ್ನು ನಿವೇಶನವಿಲ್ಲದ ಬಡ ಕುಟುಂಬಗಳಿಗೆ ಉಚಿತವಾಗಿ ಹಂಚಿಕೆ ಮಾಡಬೇಕು. ಬಡವರ ಹಕ್ಕಿನ ಭೂಮಿಯನ್ನು ಆದಾಯದ ಮೂಲವನ್ನಾಗಿ ಬಳಸಬಾರದು ಎಂದು ಆಗ್ರಹಿಸಿದರು.ವಂತಿಕೆ ಹಣ ಬಡ್ಡಿ ಸಮೇತ ಹಿಂದಿರುಗಿಸಿ:ಪಾಂಡು ಸುತಾರ ಮಾತನಾಡಿ, 2022ರಲ್ಲಿ ಅಂದಿನ ಸರಕಾರದ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಸಹ ನಿವೇಶನ ನೀಡುವುದಾಗಿ ಹೇಳಿ ಅನೇಕ ಬಡ ಕುಟುಂಬಗಳಿಂದ ತಲಾ 30 ಸಾವಿರ ವಂತಿಕೆ ಹಣ ಸಂಗ್ರಹಿಸಲಾಗಿದೆ. ಹಲವರು ಸಾಲ ಮಾಡಿ, ಬಡ್ಡಿಗೆ ಹಣ ತಂದು ಪಾವತಿಸಿದ್ದಾರೆ. ಆದರೆ ಇಂದಿಗೂ ಅವರಿಗೆ ನಿವೇಶನವೂ ದೊರೆತಿಲ್ಲ, ಕಟ್ಟಿದ ಹಣವೂ ವಾಪಸ್ ಸಿಕ್ಕಿಲ್ಲ. ಹೀಗಾಗಿ ವಂತಿಕೆ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ಅಥವಾ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ಆಕ್ಷೇಪಣೆಗಳಿಗೆ ಗೌರ ನೀಡಿ:ವಿನಾಯಕ ಕಂಬಳಿ ಮಾತನಾಡಿ, ಸಮಿತಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಮೊದಲು ಎಲ್ಲ ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು, ಈಗಾಗಲೇ ಮನೆ ಅಥವಾ ನಿವೇಶನ ಹೊಂದಿರುವವರ ಹೆಸರನ್ನು ಕೈಬಿಡಬೇಕು, ನೈಜ ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಮೊದಲ ಆದ್ಯತೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಆಶ್ರಯ ಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಿ, ಬಡವರ ವಿಶ್ವಾಸ ಉಳಿಸುವಂತೆ ಮನವಿ ಮಾಡಿದರುಕಣ್ಣೀರಿಟ್ಟ ಫಲಾನುಭವಿಗಳು:ಪ್ರತಿಭಟನೆ ವೇಳೆ ಹಲವು ವರ್ಷಗಳಿಂದ ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರದ ಮಹಿಳೆಯರು ಹಾಗೂ ಹಿರಿಯರು ಆಶ್ರಯ ಸಮಿತಿ ಅಧ್ಯಕ್ಷರ ಎದುರು ಕಣ್ಣೀರಿಟ್ಟರು. "ವರ್ಷ ದಿಂದ ವರ್ಷಕ್ಕೆ ಅರ್ಜಿ ಹಾಕುತ್ತಿದ್ದೇವೆ. ನಮ್ಮ ಬಳಿ ಸ್ವಂತ ಸೂರು ಇಲ್ಲ. ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಕೆಲವರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಮಳೆ ಬಂದರೆ ನೀರು ಸೋರುತ್ತದೆ. ಹಾವು, ಚೇಳು ಸೇರಿದಂತೆ ವಿಷಕಾರಿ ಪ್ರಾಣಿಗಳ ಭಯದಲ್ಲೇ ಬದುಕುತ್ತಿದ್ದೇವೆ. ಆದರೂ ನಮ್ಮನ್ನು ಪರಿಗಣಿಸಿಲ್ಲ, ಈ ಬಾರಿಯೂ ನಮ್ಮನ್ನು ಕಡೆಗಣಿಸಿದರೆ ನಮ್ಮ ಬದುಕಿಗೆ ಅರ್ಥವೇ ಉಳಿಯುವುದಿಲ್ಲ. ನಮ್ಮ ಪರಿಸ್ಥಿತಿಯನ್ನು ಅಧಿಕಾರಿಗಳು ಒಮ್ಮೆ ಬಂದು ನೋಡಿ. ನಿಜವಾದ ಬಡವರನ್ನು ಗುರುತಿಸಿ ನ್ಯಾಯ ಒದಗಿಸಬೇಕು " ಎಂದು ಮನವಿ ಮಾಡಿದರು. ಈ ವೇಳೆ ದುರ್ಗೇಶ ಗೋಣೆಮ್ಮವರ, ಲಕ್ಷ್ಮಿ ಬೊಮ್ಮಲಾಪುರ, ಖಾದರಸಾಬ ದೊಡ್ಡಮನಿ, ಗುತ್ತೆ ಮ್ಮ ಮಾಳಗಿ, ಅನ್ನಪೂರ್ಣ ಎಸ್.ಎಚ್. ಕರಬಸಮ್ಮ ಮಡಿವಾಳರ ಐಶ್ವರ್ಯ ಮಡಿವಾಳರ, ಸೇರಿದಂತೆ ನೂರಾರು ಫಲಾನುಭವಿಗಳು ಉಪಸ್ಥಿತರಿದ್ದರು.ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ ಯರೇಶಿಮಿ, ಬಡವರಿಗೆ ನಿವೇಶನ ನೀಡಲು ಶಾಸಕರು ಹಾಗೂ ನಾವು ಬದ್ಧ. ಮುಂದಿನ ದಿನಗಳಲ್ಲಿ 25 ಎಕರೆ ಜಾಗ ಖರೀದಿ ಮಾಡಿ ಎಲ್ಲರಿಗೂ ನಿವೇಶನ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಅಲ್ಲದೇ ಲಗತ್ತಿಸಿರುವ ಈ 351 ಜನರ ಪಟ್ಟಿಗೆ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ ಅರ್ಹರಿಗೆ ನಿವೇಶನ ಕೊಡುತ್ತೇವೆ. ಅಲ್ಲಿಯವರೆಗೆ ಸಹಕರಿಸಿ ಎಂದು ಮನವಿ ಮಾಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ. 25ರಂದು ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಲೋಕಾರ್ಪಣೆ, ಅಚ್ಚುಕಟ್ಟು ವ್ಯವಸ್ಥೆಗೆ ಸೂಚನೆ
ಸಕುರ ಪ್ರೋಗ್ರಾಂಗೆ ಆಯ್ಕೆಯಾದ ಆಕಾಶ್ ಹರಿಕಂತ್ರ