ರೌಡಿ ಶೀಟರ್ ತೆಗೆಯದಿದ್ದರೆ ಸಿಎಂ ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork |  
Published : Jun 23, 2026, 01:15 AM IST
22ಕೆಆರ್ ಎಂಎನ್ 4.ಜೆಪಿಜಿಆಲ್ ಇಂಡಿಯಾ ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಸಾಮಾಜಿಕ ಹೋರಾಟಗಾರ ಮತ್ತು ಗಾಯಕನಾಗಿ ವೆಂಕಟಾಚಲ (ಆಕಾಶ್) ಗುರುತಿಸಿಕೊಂಡವರು. ಅವರ ವಿರುದ್ಧ ರೌಡಿಶೀಟರ್ ತೆರೆದು ಜಿಲ್ಲೆಯಿಂದ ಗಡಿಪಾರು ಮಾಡುವ ಹುನ್ನಾರ ನಡೆಸುತ್ತಿರುವುದನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು

ರಾಮನಗರ: ಸಾಮಾಜಿಕ ಹೋರಾಟಗಾರ ಮತ್ತು ಗಾಯಕನಾಗಿ ವೆಂಕಟಾಚಲ (ಆಕಾಶ್) ಗುರುತಿಸಿಕೊಂಡವರು. ಅವರ ವಿರುದ್ಧ ರೌಡಿಶೀಟರ್ ತೆರೆದು ಜಿಲ್ಲೆಯಿಂದ ಗಡಿಪಾರು ಮಾಡುವ ಹುನ್ನಾರ ನಡೆಸುತ್ತಿರುವುದನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾತನೂರು ಪೊಲೀಸ್ ಠಾಣೆಯಲ್ಲಿ ಸಿವಿಲ್ ಸ್ವರೂಪವುಳ್ಳ ವ್ಯಾಜ್ಯಗಳ ವಿಚಾರವನ್ನು ಉದ್ದೇಶಪೂರ್ವಕವಾಗಿ ಕೇಸಿಗೆ ಕೌಂಟರ್ ಕೇಸು ಮಾಡಿ ವೆಂಕಟಾಚಲ ಅವರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗಿದೆ. ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ವೆಂಕಟಾಚಲ ಅವರು ಎಐಬಿಎಸ್ಪಿ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷರಾಗುವುದಕ್ಕೂ ಮೊದಲು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸುಮಾರು 20 ವರ್ಷಗಳಿಂದ ಬಹುಜನ ಚಳವಳಿಯ ಮೂಲಕ ಸಾರ್ವಜನಿಕ ಜೀವನದಲ್ಲಿ ಸಾಮರಸ್ಯ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕೌಂಟರ್ ಕೇಸು ದಾಖಲು:

2011ರಲ್ಲಿ ದೊಡ್ಡಾಲಹಳ್ಳಿಯಲ್ಲಿ ಕುಡಿಯುವ ನೀರಿಗೆ ಸವರ್ಣೀಯರು ವಿಷ ಹಾಕಿ ಸಾವು-ನೋವಿಗೆ ಕಾರಣರಾಗಿದ್ದರು. ಅಲ್ಲದೆ, ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಎಸಗಿ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಘಟನೆ ಖಂಡಿಸಿ ದೊಡ್ಡಾಲಹಳ್ಳಿಯಿಂದ ರಾಮನಗರದವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವೆಂಕಟಾಚಲ ವಿರುದ್ಧ ಕೌಂಟರ್ ಕೇಸು ಹಾಕಿಸಿದ್ದರು ಎಂದು ದೂರಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ದಲಿತರಿಗೆ ನಿವೇಶನ ಮತ್ತು ಸ್ಮಶಾನ ಭೂಮಿ ಕೊಡುತ್ತೇವೆ. ಅದಕ್ಕಾಗಿ ಕಪ್ಪು ಗ್ರಾನೈಟ್ ಕಲ್ಲನ್ನು ತೆರವುಗೊಳಿಸುತ್ತೇವೆಂದು ಹೇಳಿ 6-7 ವರ್ಷಗಳಾಗಿದೆ. ಈ ಬಗ್ಗೆ ನ್ಯಾಯ ಕೇಳಲು ಹೋದ ವೆಂಕಟಾಚಲ ಮೇಲೆ ಸ್ವಜಾತಿಯವರನ್ನೇ ಎತ್ತಿಕಟ್ಟಿ ಕೇಸಿಗೆ ಪ್ರತಿಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಐದು ತಿಂಗಳ ಹಿಂದಷ್ಟೇ ಸಾತನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಗಿ ಬಂದಿರುವ ಸಮಂತ್‌ಗೌಡ ರಾಜಕೀಯ ಪ್ರೇರಿತವಾಗಿ ವೆಂಕಟಾಚಲ ಅವರ ಮೇಲೆ ಸುಳ್ಳು ಮಾಹಿತಿಯುಳ್ಳ ವರದಿಯನ್ನು ಸೃಷ್ಟಿ ಮಾಡಿದ್ದಾರೆ. ಕನಕಪುರ ವೃತ್ತ ನಿರೀಕ್ಷಕ ವಿಕಾಸ್, ಚನ್ನಪಟ್ಟಣ ಪೊಲೀಸ್ ಉಪ ವಿಭಾಗದ ಗಿರಿಗೌಡರು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡರಿಗೆ ವೆಂಕಟಾಚಲರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಗಡಿಪಾರು ಪ್ರಸ್ತಾವನೆ ಕೈಬಿಡಿ:

ಈ ಪ್ರಸ್ತಾವನೆಯನ್ನು ವಜಾಗೊಳಿಸಬೇಕು. ಅಧಿಕಾರ ಮತ್ತು ಕರ್ತವ್ಯ ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖಾ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ವಲಯ ಐಜಿಪಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಇಂತಹ ಅನೇಕ ಸುಳ್ಳು ಪ್ರಕರಣಗಳು ಕನಕಪುರ, ಕೋಡಿಹಳ್ಳಿ ಹಾಗೂ ಸಾತನೂರು ಠಾಣೆಯಲ್ಲಿ ದಾಖಲಾಗುತ್ತಿವೆ. ಬಡವರು, ನ್ಯಾಯಪರ ಹೋರಾಟಗಾರರ ಮೇಲೆ ಕೇಸು ಹಾಕಿ ರೌಡಿಶೀಟರ್ ತೆರೆದು ಅವರ ಬದುಕು ಮತ್ತು ಭವಿಷ್ಯ ನಾಶ ಮಾಡುತ್ತಿದ್ದಾರೆ. ಈ ಠಾಣೆಗಳಲ್ಲಿ ಹೋರಾಟಗಾರ ಮೇಲೆ ಹಾಕಿರುವ ಕೇಸುಗಳನ್ನು ದಕ್ಷ ಉನ್ನತ ಅಧಿಕಾರಿಗಳಿಂದ ವಿಶೇಷ ತನಿಖೆ ನಡೆಸಿ ಸುಳ್ಳು ಪ್ರಕರಣಗಳನ್ನು ಕೈಬಿಡಬೇಕು ಎಂದರು.

ಅಧಿಕಾರ ದುರ್ಬಳಕೆ , ಕರ್ತವ್ಯ ಲೋಪ ಎಸಗಿದವರನ್ನು ಹಾಗೂ ಸಾತನೂರು ಪೊಲೀಸ್ ಇನ್ಸ್ ಪೆಕ್ಟರ್ ಸಮಂತ್ ಗೌಡ ಅವರನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ನಾಗೇಶ್ , ಬಿ.ಅನ್ನದಾನಪ್ಪ , ಮುಖಂಡರಾದ ವೆಂಕಟಾಚಲ, ಮುರುಗೇಶ್, ಲೋಕೇಶ್ ,ಗೌರಮ್ಮ, ಶಿಲ್ಪಾ, ಕೃಷ್ಣಮೂರ್ತಿ, ಪಾರ್ವತಮ್ಮ, ಉಮೇಶ್ ಮತ್ತಿತರರಿದ್ದರು.

ಕೋಟ್ .............

ಬಲಾಢ್ಯರ ವಿರುದ್ಧ ಧ್ವನಿ ಎತ್ತುವವರನ್ನು ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ನಡೆಯುತ್ತಿದೆ. ಆದ್ದರಿಂದ ಪೊಲೀಸ್ ಅಧೀಕ್ಷಕರು, ಸಾಮಾಜಿಕ ಹೋರಾಟಗಾರರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ವರದಿ ಮಾಡಿ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿರುವ ಸಂಬಂಧಪಟ್ಟವರ ಬಗ್ಗೆ ವಿಶೇಷ ತನಿಖೆ ನಡೆಸಿ ಸತ್ಯಾಂಶ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಈ ರೀತಿಯ ಸುಳ್ಳು ವರದಿ ಮಾಡಿ ಕಾನೂನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

-ಎಂ.ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಐಬಿಎಸ್ಪಿ

22ಕೆಆರ್ ಎಂಎನ್ 4.ಜೆಪಿಜಿ

ಆಲ್ ಇಂಡಿಯಾ ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ