)
ರಾಮನಗರ: ಡಿ.ಕೆ.ಶಿವಕುಮಾರ್ ಅವರೇ ಹೆದರಬೇಡಿ. ಭೂ ಸ್ವಾಧೀನ ಕೈಬಿಟ್ಟು ರೈತನ ಮಗ ಎಂಬುದನ್ನು ಸಾಬೀತು ಪಡಿಸಿ. ನೀವು ಜೈಲಿಗೆ ಹೋದರೆ ಸಾವಿರಾರು ರೈತರು ಜೈಲಿಗೆ ಬರುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸವಾಲು ಹಾಕಿದರು.
ಕಾನೂನಿನಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನೋಟಿಫಿಕೇಷನ್ ಹೊರಡಿಸಲು ಅವಕಾಶ ಕೊಟ್ಟಿರುವಂತೆ, ಅದೇ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲು ಡಿ ನೋಟಿಫಿಕೇಷನ್ ಮಾಡಲು ಅವಕಾಶ ನೀಡಿದೆ. ಆದರೆ, ಡಿಕೆಶಿರವರು ಡಿ ನೋಟಿಫೈ ಮಾಡಿ ಜೈಲಿಗೆ ಹೋಗಬೇಕಾ ಅಂತಾರೆ. ರೈತರ ಬದುಕಿನ ಹಿತಾಸಕ್ತಿಗಾಗಿ ಭೂಮಿ ಕೈಬಿಟ್ಟರೆ ಜೈಲಿಗೆ ಹೋಗಬೇಕಾಗಿಲ್ಲ ಎಂದರು.
ಡಿಕೆಶಿರವರು ಶೇಕಡ 80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಒಪ್ಪಿಗೆ ಸೂಚಿಸಿರುವ ಶೇಕಡ 80ರಷ್ಟು ರೈತರ ಫೋಟೋ, ಸರ್ವೆ ನಂಬರ್ ಗಳನ್ನು ಬಿಡುಗಡೆ ಮಾಡಲಿ. ಇಲ್ಲದಿದ್ದರೆ ನಾವು ವಿರೋಧವಿರುವ ರೈತರ ವಿವರ ಬಿಡುಗಡೆ ಮಾಡುತ್ತೇವೆ. ನಾವು ರೈತರ ಮಕ್ಕಳು ಸುಳ್ಳು ಹೇಳಲ್ಲ. ಸುಳ್ಳು ಹೇಳಿ ಕುರ್ಚಿ ಪಡೆಯಬೇಕಾಗಿಲ್ಲ ಎಂದು ಹೇಳಿದರು.ಡಿ ನೋಟಿಫೈ ಮಾಡದಿದ್ದರೆ ಇದು ರೈತರು ಮಾತ್ರವಲ್ಲ ಅನ್ನ ತಿನ್ನುವವರ ಚಳವಳಿಯಾಗಿ ರೂಪಿಸುತ್ತೇವೆ. ಅವರು ಹಠಕ್ಕೆ ಬಿದ್ದರೆ ಬೀದಿಗೆ ಇಳಿದು ಜೖೆಲಿಗೆ ಹೋಗೋಣ. ರೈತ ಚಳವಳಿ ಎದುರು ಯಾವ ಹಠವೂ ನಡೆಯಲ್ಲ ಎಂದು ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 9 ಜಿಲ್ಲೆಗಳ ಹೋರಾಟಗಾರರು ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿರುವುದು ರೈತ ಚಳವಳಿಗೆ ದೊಡ್ಡ ಬಲ ತಂದಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡು ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ಕೆಲಸ ಮಾಡುತ್ತಿವೆ. ಸರ್ಕಾರದ ಎಲ್ಲ ಕುತಂತ್ರಗಳು ಯಶಸ್ವಿಯಾಗದೆ, ಈ ಯೋಜನೆಯನ್ನು ತಿರಸ್ಕರಿಸುವ ದಿನಗಳು ಹತ್ತಿರದಲ್ಲಿವೆ.