ಕಡೂರು, ತರೀಕೆರೆ ಹಾಗೂ ಅಜ್ಜಂಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಪರಿಶೀಲನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಎರಡೆರಡು ಬಾರಿ ಬೀಜ ಬಿತ್ತನೆ ಮಾಡಿದರೂ ಮೊಳಕೆ ಆಗಿಲ್ಲ. ಕೆರೆಗಳಲ್ಲಿ ಒಂದೇ ಒಂದು ಹನಿ ನೀರಿಲ್ಲ, ಅಲ್ಪಸ್ವಲ್ಪ ಮೊಳಕೆ ಯಾದ ಬೆಳೆ ತೇವಾಂಶ ಕೊರತೆಯಿಂದ ಒಣಗಿದೆ. ಬೆಳೆ ಮಾತ್ರವಲ್ಲದೇ, ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ.

ಇದು... ಮಲೆನಾಡಿಗೆ ಹೊಂದಿಕೊಂಡಿರುವುದು ಚಿಕ್ಕಮಗಳೂರಿನ ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದ ಪರಿಸ್ಥಿತಿ.

ಈ ನಡುವೆ ಇನ್ನೂ ಸಹ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಜಮೀನು ಹದ ಮಾಡಿಕೊಂಡು ಕಾದಿರುವ ರೈತರು.


ಇದೆಲ್ಲವೂ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಜೆ.ಜಾರ್ಜ್ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗದಲ್ಲಿ ನಡೆಸಿದ ಬರ ಪರೀಶೀಲನೆ ಸಂದರ್ಭದಲ್ಲಿ ಕಂಡು ಬಂದ ಭೀಕರ ಬರದ ನಾಡಿನ ನಿಜಸ್ಥಿತಿ.

ಶುಕ್ರವಾರ ಮೊದಲು ತರಿಕೆರೆ ತಾಲೂಕಿಗೆ ಭೇಟಿ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು‌. ಬಳಿಕ ಅಜ್ಜಂಪುರ ತಾಲೂಕಿನ ಬೇಗೂರು, ಮುದಿಗೆರೆ, ಕಲ್ಕೆರೆ ಭಾಗದಲ್ಲಿ ಭಾಗದಲ್ಲಿ ಈರುಳ್ಳಿ ನಾಟಿ ಮಾಡಿದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡದ್ದು ಕಂಡು ಬಂದವು. ಕೆರೆಗಳಲ್ಲಿ ಒಂದು ಹನಿ ನೀರು ಸಂಗ್ರಹವಾಗದಿರುವುದನ್ನು ಸಚಿವರು ಗಮನಿಸಿದರು.

ಬಳಿಕ ಕಡೂರು ತಾಲೂಕಿನ ಚಿಕ್ಕಬಳ್ಳೇಕೆರೆ ಕಾವಲು, ದೊಣ್ಣೆ ಕೋರನಹಳ್ಳಿ, ಅಣ್ಣೆಗೆರೆ ಭಾಗದಲ್ಲಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ರೈತರು ಬಿತ್ತನೆ ಮಾಡಲು ಆಗದಷ್ಟು ಕನಿಷ್ಠ ಮಳೆಯಾಗದಿರುವುದನ್ನು ಕಂಡ ಸಚಿವರು ರೈತರಿಗೆ ಧೈರ್ಯ ತುಂಬಿ ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆಯಾದಲ್ಲಿ ಬೆಳೆ ಬೆಳೆಯಿರಿ. ಇಲ್ಲದಿದ್ದಲ್ಲಿ ಕಡಿಮೆ ನೀರಲ್ಲಿ ಬೆಳೆವ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಅಧಿಕಾರಿಗಳ ಬಳಿ ಮಳೆ ಹಾಗೂ ಬೆಳೆ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಕೇಳಿದ ಮಾಹಿತಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತರೀಕೆರೆಯ ಕೆಲಭಾಗ ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ವಾಡಿಕೆಗಿಂತ ಶೇ. 70ಕ್ಕೂ ಕಡಿಮೆ ಮಳೆಯಾಗಿದೆ. ರೈತರಿಗೆ ಈವರೆಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ಈರುಳ್ಳಿ, ಆಲೂಗಡ್ಡೆ, ಹಸಿ ಮೆಣಸಿನ ಬೆಳೆಗಳ ಬದಲು ರಾಗಿ ಬೆಳೆಯುವಂತೆ ರೈತರಿಗೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

-- ಬಾಕ್ಸ್....

ಮೇವು ಬೆಳೆಯಲು ಕ್ರಮ ಕೈಗೊಳ್ಳಿ

ಅಜ್ಜಂಪುರ ಸಮೀಪದ ಅಮೃತ ಮಹಲ್ ಕಾವಲ್ ಪ್ರದೇಶದ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಅಮೃತ್ ಮಹಲ್ ಗೆ ಸೇರಿದ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಬೆಳೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮೃತ್‌ ಮಹಲ್ ನಲ್ಲಿ 700 ಎಕರೆಗೂ ಹೆಚ್ಚು ಪ್ರದೇಶವಿದೆ. ಆದರೆ ಕೆಲವೇ ಕೆಲವು ಎಕರೆಯಲ್ಲಿ ಮಾತ್ರ ಮೇವು ಬೆಳೆಯ ಲಾಗುತ್ತಿದೆ‌. ಈ ಬಾರಿ ಜಿಲ್ಲೆಯ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ದಿನ ಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯಾಗದಂತೆ ತಡೆಯಲು ಈ ಜಾಗದಲ್ಲಿ ಹೆಚ್ಚಿನ ಮೇವು ಬೆಳೆಯಬೇಕು ಎಂದರು.

ಅಮೃತ್ ಮಹಲ್ ಕಾವಲ್ ನ ಉಪ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್, ಉತ್ತರಿಸಿ ನಮ್ಮಲ್ಲಿ ಜಾಗವೇನೋ ಇದೆ. ಆದರೆ ನೀರಿನ ಸಮಸ್ಯೆ ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ವಿದ್ಯುತ್ ಸಮಸ್ಯೆಯಿಂದ ನೀರಿಗೆ ಸಮಸ್ಯೆಯಾಗುತ್ತಿದೆ ಎಂದು ವಿವರಿಸಿದರು.

ಸಮಸ್ಯೆ ಮನಗಂಡ ಸಚಿವರು ಕೂಡಲೇ ಕುಸುಮ್‌ ಬಿ ಯೋಜನೆಯಡಿ ಅಮೃತ್ ಮಹಲ್ ಪ್ರದೇಶದ ಕೊಳವೆ ಬಾವಿಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯುವಂತೆ ಸೂಚನೆ ನೀಡಿದರು. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಅವುಗಳಿಗೂ ಕುಸುಮ್ ಯೋಜನೆಯಡಿ ಮೋಟರ್ ಅಳವಡಿಸಲು ಸೂಚಿಸಿದರು.

ಈ ವೇಳೆ ಮಾತನಾಡಿದ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಅಮೃತ್ ಮಹಲ್ ಕಾವಲ್‌ ಪ್ರದೇಶದಲ್ಲಿ ಜಾಲಿ ಗಿಡಗಳು ದೊಡ್ಡದಾಗಿ ಬೆಳೆದಿವೆ. ಇವುಗಳನ್ನು ಕಾರ್ಮಿಕರನ್ನು ಬಳಸಿಕೊಂಡು ತೆರವು ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಂತ್ರ ಗಳನ್ನೇ ಬಳಸಬೇಕಿದೆ. ಕಾರ್ಮಿಕರನ್ನು ಬಳಸಿಕೊಂಡು ಜಾಗ ಸ್ವಚ್ಛ ಮಾಡುವುದಾಗಿದ್ದರೆ ವಿಬಿ ರಾಮ್ ಜಿ ಯೋಜನೆಯಲ್ಲಿ ಕೆಲಸ ಕೈಗೆತ್ತಿಕೊಳ್ಳಬಹುದಿತ್ತು. ಹೊಸ ಕ್ರಿಯಾ ಯೋಜನೆ ತಯಾರಿಸಬೇಕಿದೆ ಎಂದು ಮಾಹಿತಿ ನೀಡಿದರು.... ಬಾಕ್ಸ್.....

ಪಂಪ್‌ ಹೌಸ್ ಗೆ ಭೇಟಿ

ತರೀಕೆರೆಗೆ ಆಗಮಿಸಿದ ಸಚಿವ ಕೆಜೆ ಜಾರ್ಜ್ ಅವರು ನೇರವಾಗಿ ದೋರನಾಳು ಗ್ರಾಮದ ಹೊರವಲಯದ ಭದ್ರ ಮೇಲ್ದಂಡೆ ಯೋಜನೆಯಿಂದ ನೀರೆತ್ತಿ ತರೀಕೆರೆ, ಕಡೂರು, ಚಿಕ್ಕಮಗಳೂರು, ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರೊದಗಿಸುವ ಪಂಪ ಹೌಸ್ ಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಮೊದಲು ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕಿದೆ. ಹೀಗಾಗಿ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲು ನೀರಾವರಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದೇವೆ. ಇನ್ನು 3-4 ನಾಲ್ಕು ದಿನಗಳಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ನಾಲೆಯಲ್ಲಿ ನೀರು ಬಂದಾಕ್ಷಣ ಪಂಪ್ ಹೌಸ್ ನಿಂದ ನೀರೆತ್ತಿ ಕೆರೆ ಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಮಾಹಿತಿ ನೀಡಿದರು.-- ಬಾಕ್ಸ್‌---

ಎರಡು ದಿನಗಳಲ್ಲಿ ಭದ್ರಾದಿಂದ ನೀರು

ತರೀಕೆರೆ, ಕಡೂರು, ಅಜ್ಜಂಪುರ ತಾಲೂಕಿನಲ್ಲಿ ಮಳೆ ಅಭಾವದಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಭದ್ರಾ ಮೇಲ್ದಂಡೆ ಯೋಜನೆ ನಾಲೆಗಳ ಮೂಲಕ ತಕ್ಷಣ ನೀರು ಹರಿಸುವುದಕ್ಕೆ ಕ್ರಮ ಕೈಗೊಳ್ಳ ಲಾಗುವುದು ಎಂದು ಇಂಧನ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ಈಗಾಗಲೇ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ನೀರಾವರಿ ಇಲಾಖೆ ಸಚಿವರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಅವರೊಂದಿಗೆ ಚರ್ಚೆ ಮಾಡಲಾಗಿದ್ದು, ಒಂದೆರಡು ದಿನದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನಾಲೆಗಳಿಗೆ ಕುಡಿವ ನೀರಿನ ಪೂರೈಕೆಗೆ ಕ್ರಮ ವಹಿಸಲು ನಿರ್ದೇಶಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಬರ ಘೋಷಣೆಗೆ ಮಾನದಂಡಗಳಿದ್ದು, ಈಗಾಗಲೇ ಬರ ಕುರಿತು ಜಿಲ್ಲಾಧಿಕಾರಿ ಒಂದು ವರದಿ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದು ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರು ಬರ ಘೋಷಣೆ ಬಗ್ಗೆ ಕ್ರಮ ವಹಿಸಲಿದ್ದಾರೆ. ಇನ್ನೂ ಬರ ಅಧ್ಯಯನ ಕುರಿತು ತಾವೂ ಸಹ ಮುಖ್ಯಮಂತ್ರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಶಾಸಕರಾದ ಜಿ.ಎಚ್‌.ಶ್ರೀನಿವಾಸ್‌, ಎಚ್‌.ಡಿ.ತಮ್ಮಯ್ಯ, ಕೆ.ಎಸ್‌.ಆನಂದ್‌, ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ, ಜಿಪಂ ಸಿಇಒ ಎಚ್‌.ಎಸ್‌.ಕೀರ್ತನಾ, ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ಕಾಡ ಅಧ್ಯಕ್ಷ ಅಂಶುಮಂತ್‌, ಸಿಡಿಎ ಅಧ್ಯಕ್ಷ ಮಂಜೇಗೌಡ ಮೊದಲಾದವರಿದ್ದರು.--- ಬಾಕ್ಸ್‌---

21 ಮಳೆ ಮಾಪನ ಕೆಲಸ ಮಾಡುತ್ತಿಲ್ಲ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ತಿಂಗಳು ಕೇವಲ 140 ಮಳೆ ಮಾಪನ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಈಗ ದುರಸ್ತಿ ಮಾಡಲಾಗಿದ್ದು 221 ಕೇಂದ್ರಗಳು ಕಾರ್ಯನಿವರ್ಹಿಸುತ್ತಿವೆ. ಕೇವಲ 21 ಮಾತ್ರ ದುರಸ್ತಿ ಆಗಬೇಕಾಗಿದೆ. ಒಂದೆರಡು ದಿನಗಳಲ್ಲಿ ದುರಸ್ತಿ ಆಗಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

--- ಬಾಕ್ಸ್‌---

ಯಾವ ಯಾವ ಗ್ರಾಮದಲ್ಲಿ ಬರ ಪರಿಶೀಲನೆ?ಅಜ್ಜಂಪುರ ತಾಲೂಕಿನ ತೇಗೂರು, ಮುದಿಗೆರೆ, ಕಡೂರಿನ ಅಡಗಲು, ಕಲ್ಕರೆ, ಗೊಲ್ಲರಹಟ್ಟಿ, ದೊಣ್ಣೆಕೋರನಹಳ್ಳಿ ಹಾಗೂ ಅಣ್ಣಿಗೆರೆ ಗ್ರಾಮದ ವ್ಯಾಪ್ತಿಯ ಕೃಷಿ ಜಮೀನು, ಕೆರೆ ಸೇರಿದಂತೆ ಮೊದಲಾದ ಕಡೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ರೈತರು, ಗ್ರಾಮಸ್ಥರು, ಅಧಿಕಾರಿಗಳಿಂದ ಮಳೆ, ವಿದ್ಯುತ್‌ ಸಮಸ್ತೆ ಸೇರಿದಂತೆ ಮೊದಲಾದ ವಿಚಾರಗಳ ಬಗ್ಗೆ ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ ಪಡೆದರು.-- ಬಾಕ್ಸ್‌ ---

9ನೇ ಮೈಲಿಯಲ್ಲಿ ಅಡ್ಡಗಟ್ಟಿದ ರೈತರು

ಬರ ಪರಿಸ್ಥಿತಿ ಅಧ್ಯಯನಕ್ಕೆ ಕಡೂರು ತಾಲೂಕಿನ ವಿವಿಧ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಕಡೂರಿಗೆ ತೆರಳುವ ಮಾರ್ಗದ 9 ಮೈಲಿ ಸರ್ಕಲ್‌ನಲ್ಲಿ ಸಚಿವ ಕೆ.ಜೆ.ಜಾರ್ಜ್‌ ಸೇರಿದಂತೆ ಶಾಸಕರು, ಅಧಿಕಾರಿಗಳ ಕಾರು ಅಡ್ಡಗಟ್ಟಿ ಭದ್ರಾ ಮೇಲ್ದಂಡೆ ಯೋಜನೆಯ ಜಮೀನು ಕಳೆದುಕೊಂಡ ರೈತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆಗೆ ಆಗ್ರಹಿಸಿದ ಘಟನೆ ನಡೆಯಿತು. -- ಬಾಕ್ಸ್‌---

ಬರ ಪರಿಸ್ಥಿತಿ ಅಧ್ಯಯನ ವೇಳೆ ಕಾರುಗಳ ದರ್ಬಾರ್‌

ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಶಾಸಕರಾದ ಕೆ.ಎಸ್‌.ಆನಂದ್‌, ಶ್ರೀನಿವಾಸ್‌ ಹಾಗೂ ಅಧಿಕಾರಿಗಳು ಭೇಟಿ ನೀಡಿದ ವೇಳೆ ಬರೋಬ್ಬರಿ 150ಕ್ಕೂ ಅಧಿಕ ಕಾರುಗಳು ಸಾಲುಗಟ್ಟೆ ರಸ್ತೆಯಲ್ಲಿ ಸಂಚರಿಸಿದವು.

ಈ ವೇಳೆ ಇಡೀ ರಸ್ತೆ ಬ್ಲಾಕ್‌ ಆಗಿತ್ತು. ಇದರಿಂದ ಕಡೂರು ತಾಲೂಕಿನ ಒಂದು ಕಡೆ ಶಾಲಾ ವಾಹನ ರಸ್ತೆಯಲ್ಲಿ ಸುಮಾರು 20 ರಿಂದ 30 ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

--- ಬಾಕ್ಸ್‌--ಶಾಸಕ- ಸಚಿವರ ಮುನಿಸು ಬರ ಪರಿಸ್ಥಿತಿ ಅಧ್ಯಯನದ ವೇಳೆ ಶಾಸಕ ಆನಂದ್‌ ಅವರು ಪಿಂಚಣಿ ಯೋಜನೆ ನಿಲ್ಲಿಸಲಾಗಿದೆ. ಇದರಿಂದ ತಾಲೂಕಿನ ಬರೋಬ್ಬರಿ 29 ಸಾವಿರ ಮಂದಿ ಪಿಂಚಣಿ ತಡೆಹಿಡಿಯಲಾಗಿದೆ ಎಂದರು. ಆಗ ಉತ್ತರಿಸಿದ ಕಡೂರು ತಹಸೀಲ್ದಾರ್‌, ನೋಟಿಸ್‌ ಜಾರಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹರಿಗೆ ಪಿಂಚಣಿ ನೀಡಲಾಗುತ್ತಿದೆ ಎಂದರು. ಈ ಉತ್ತರಕ್ಕೆ ಅಸಮಾಧಾನಗೊಂಡ ಶಾಸಕ ಆನಂದ್‌ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದರು. ಆಗ ಕೋಪ ಗೊಂಡ ಸಚಿವ ಕೆ.ಜೆ.ಜಾರ್ಜ್‌, ತಪ್ಪು ಮಾಹಿತಿ ನೀಡುತ್ತಿದ್ದೀರಾ ಎಂದು ಹೇಳಿ ಅದನ್ನು ಬಿಟ್ಟು ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎನ್ನುವುದು ಸರಿ ಅಲ್ಲ. ಸರ್ಕಾರದ ಆದೇಶದ ಪ್ರಕಾರ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದರು.