ತರೀಕೆರೆಆರ್ಥಿಕವಾಗಿ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಇದಕ್ಕಾಗಿ ಒಂದೇ ತಂಡದಂತೆ ನಾವೆಲ್ಲಾ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತರೀಕೆರೆ

ಆರ್ಥಿಕವಾಗಿ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಇದಕ್ಕಾಗಿ ಒಂದೇ ತಂಡದಂತೆ ನಾವೆಲ್ಲಾ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಪುರಸಭಾ ಕಾರ್ಯಾಲಯದಿಂದ ಕೋರ್ಟ್ ಹಿಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪುರಸಭಾ ನೂತನ ಕಟ್ಟಡ ನಿರ್ಮಾಣ ಮತ್ತು ಸಿಎಂಐಡಿಪಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ 2750 ಮೆಗಾವಾಟ್‌ಗೂ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದು ರೈತರು ಮತ್ತು ಕೈಗಾರಿಕೆಗಳ ಅಗತ್ಯ ಕ್ಕೆ ತಕ್ಕಂತೆ ನೀಡುತ್ತಿದ್ದು, ರೈತರಿಗೆ 7 ಗಂಟೆ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಶಾಸಕ ಜಿ.ಎಚ್. ಶ್ರೀನಿವಾಸ್ ಪ್ರಯತ್ನದಿಂದ ತರೀಕೆರೆಯಲ್ಲಿ ₹7.5 ಕೋಟಿಯಲ್ಲಿ ಪುರಸಭೆ ನೂತನ ಕಚೇರಿ ಕಟ್ಟಡಕ್ಕೆ ಇಂದು ಶಂಕುಸ್ಥಾಪನೆ ನರವೇರಿದೆ. ಇದು ಒಂದು ಶುಭ ಲಕ್ಷಣ. ಮಳೆಯೂ ಉತ್ತಮವಾಗಿದೆ. ಭದ್ರಾ ಅಣೆಕಟ್ಟಿಗೆ ನೀರು ಬರುತ್ತಿದೆ ಎಂಬುದು ಸಂತೋಷ ತಂದಿದೆ. ಒಂದು ವರ್ಷದಲ್ಲಿ ಪುರಸಭೆ ಕಟ್ಟಡ ನಿರ್ಮಾಣ ಪೂರ್ಣವಾಗಲಿದೆ ಎಂದು ಹೇಳಿದರು.

ಕುಡಿವ ನೀರಿಗೆ ಮೊದಲ ಆದ್ಯತೆ ನೀಡಲು ಮುಖ್ಯಮಂತ್ರಿ ಅದೇಶಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸಾಕಷ್ಟು ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದಾರೆ. ಐದು ಗ್ಯಾರಂಟಿ ಯೊಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಗೃಹಜ್ಯೋತಿ ನನ್ನ ವಿಭಾಗ. ಶಾಸಕ ಜಿ.ಎಚ್. ಶ್ರೀನಿವಾಸ್ ನಮ್ಮ ಮಿತ್ರರು ಎಂದು ಹೇಳಿದರು.ಕನಸು ನನಸು:

ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ದಿನ ಪುರಸಭೆ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಸಚಿವರು ನೆರವೇರಿಸಿದ್ದಾರೆ. ಪಟ್ಟಣದ ನಾಗರಿಕರ ಬಹುದಿನದ ಕನಸು ಇಂದು ಈಡೇರಿದೆ. ಪುರಸಭೆ ನೂತನ ಕಟ್ಟಡ ನಿರ್ಮಾಣ ನನ್ನ ರಾಜಕೀಯ ಜೀವನದಲ್ಲಿ ಮಾತ್ರವಲ್ಲ, ಪಟ್ಟಣದ ಅಭಿವೃದ್ಧಿ ಇತಿಹಾಸದಲ್ಲೂ ಅತ್ಯಂತ ಮಹತ್ವದ ದಿನ. ನಮ್ಮ ಅಜ್ಜ, ತಂದೆಯವರು ಮತ್ತು ನಾನು ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇವೆ. ನಾನು ಪುರಸಭೆ ಅಧ್ಯಕ್ಷನಾಗಿ ಸೇವೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಖಾತೆ ಬದಲಾವಣೆ ಇತ್ಯಾದಿ ವಿವಿಧ ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದೇನೆ ಎಂದರು.

ವಿವಿಧ ಅನುದಾನಗಳನ್ನು ಒಗ್ಗೂಡಿಸಿ ಒಟ್ಟು ₹55.79 ಕೋಟಿಯಲ್ಲಿ ತರೀಕೆರೆ ಬಿ.ಎಚ್.ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ₹25 ಕೋಟಿ ವಿಶೇಷ ಅನುದಾನದಲ್ಲಿ, ₹5 ಕೋಟಿ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ನಾಮಫಲಕ ಅಳವಡಿಕೆ, ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ, ಸಿಎಂಐಡಿಪಿ ಯೋಜನೆಯಡಿ ₹3.50 ಕೋಟಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.

ಕೆಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ತರೀಕೆರೆ ಪಟ್ಟಣಕ್ಕೆ 24X7 ಕುಡಿಯುವ ನೀರಿನ ಸೌಲಭ್ಯ ಕಲ್ಲಿಸಲು ₹52.48 ಕೋಟಿಗಳಲ್ಲಿ, ಮುಖ್ಯಮಂತ್ರಿ ವಿಶೇಷ ಅನುದಾನ ₹10 ಕೋಟಿಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಿರ್ವಹಿಸಲಾಗಿದೆ. ಕಾಲೇಜು ಮೈದಾನಕ್ಕೆ ₹50 ಲಕ್ಷ , ₹2.36 ಕೋಟಿಗಳಲ್ಲಿ ಮಾರುಕಟ್ಟೆ ನಿರ್ಮಾಣ, ನಗರೋತ್ಧಾನ ಹಂತ 4 ರಲ್ಲಿ ₹10 ಕೋಟಿ ರು.ಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆಗೆ ₹45 ಲಕ್ಷ ರು.ಗಳಲ್ಲಿ ಕಂಪ್ಯಾಕ್ಟರ್ ವಾಹನ, ₹35 ಕೋಟಿಗಳಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಆಸ್ಪತ್ರೆ ಉದ್ಘಾಟನೆಯಾಗುತ್ತದೆ. ವಿದ್ಯುತ್ ರಿಸಿವಿಂಗ್ ಸ್ಟೇಶನ್ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ತರೀಕೆರೆ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗುತ್ತದೆ ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಶಮೀಮ್ ಬಾನು, ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೀರ್ತನ ಎಚ್.ಎಸ್. ಎಸ್ಪಿ ಜಿತೇಂದ್ರಕುಮಾರ್ ದಯಾಮ, ಉಪವಿಭಾಗಾಧಿಕಾರಿ ಎನ್.ವಿ.ನಟೇಶ್, ಪುರಸಭೆ ಮುಖ್ಯಾಧಿಕಾರಿ ತಾಹೇರಾ ತಸ್ನೀಮ್ ಮತ್ತಿತರರು ಭಾಗವಹಿಸಿದ್ದರು.

-

7ಕೆಟಿಆರ್.ಕೆ.1ಃ

ತರೀಕರೆಯಲ್ಲಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪುರಸಭಾ ನೂತನ ಕಟ್ಟಡ ನಿರ್ಮಾಣ ಮತ್ತು ಸಿ.ಎಂ.ಐ.ಡಿ.ಪಿ.ಯೋಜನೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕ ಜಿ.ಎಚ್. ಶ್ರೀನಿವಾಸ್ , ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಶಮೀಮ್ ಬಾನು, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹಾಜರಿದ್ದರು.