- ಕಚೇರಿಯ ಪ್ರವೇಶ ದ್ವಾರದ ಬಳಿ ಇಟ್ಟಿಗೆ ಇಟ್ಟು ಬೆಂಕಿ ಹಚ್ಚಿದ ಸಂಘಪರಿವಾರದ ಕಾರ್ಯಕರ್ತರು
ಚಿಕ್ಕಮಗಳೂರು: ಗುರು ದತ್ತಾತ್ರೇಯಪೀಠ ಬಾಬಾಬುಡನ್ ಗಿರಿಯಲ್ಲಿ ರಾಮ ತಾರಕ ಹೋಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದ ಕಾರಣಕ್ಕೆ ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಬಾಗಿಲಲ್ಲೇ ಹೋಮ ಕುಂಡ ನಿರ್ಮಿಸಿ ಸಾಂಕೇತಿಕವಾಗಿ ಹೋಮ ನೆರವೇರಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಸಿದ ಸಂದರ್ಭದಲ್ಲಿ ಪೊಲೀಸರು ಅವರೆಲ್ಲರನ್ನೂ ಬಂಧಿಸಿದರು.ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ದತ್ತಪೀಠಕ್ಕೆ ತೆರಳಿದ್ದ ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಅಲ್ಲಿ ರಾಮ ತಾರಕ ಹೋಮ ನಡೆಸಲು ಉದ್ದೇಶಿಸಿದ್ದರು.
ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಅಲ್ಲಿಂದ ನೇರವಾಗಿ ನಗರಕ್ಕೆ ಆಗಮಿಸಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ರಂಗನಾಥ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಇತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಈ ವೇಳೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಸಮಾಲೋಚನೆ ನಡೆಸಿದರು. ಸ್ವಲ್ಪ ಸಮಯದ ನಂತರ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಎಸ್ಪಿ ದತ್ತಪೀಠದಲ್ಲಿ ಅರ್ಚಕರಿಂದ ಪೂಜೆ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಅಲ್ಲಿಂದಲೇ ದತ್ತಪೀಠ ಚಲೋ ಕಾರ್ಯಕ್ರಮಕ್ಕೆ ಮುಂದಾದರು. ಎಸ್ಪಿ ಅವರ ನೇತೃತ್ವದಲ್ಲೇ ಸಿಬ್ಬಂದಿ ಅವರನ್ನು ತಡೆಯುವ ಪ್ರಯತ್ನ ನಡೆಸುವಾಗಲೇ ಇನ್ನೊಂದು ಗುಂಪು ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಗೊಂದಲ, ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಪೊಲೀಸರು ಬಂಧಿಸಿದರು.
ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಾಕಾರರನ್ನು ಬಂಧಿಸಿ ಟ್ರಾಫಿಕ್ ಸುಗಮಗೊಳಿಸಿದರು.
ಯೋಗೀಶ್ ರಾಜ್ ಅರಸ್, ಜೀವನ್, ಸುನೀಲ್, ಸುಮಂತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.22 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ದ್ವಾರದ ಮುಂದೆ ಸಂಘಪರಿವಾರದ ಕಾರ್ಯಕರ್ತರು ಹೋಮ ಕುಂಡ ಇಟ್ಟು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.