ನೀರಿಗಾಗಿ ಗ್ರಾಪಂ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ

KannadaprabhaNewsNetwork | Published : Mar 29, 2025 12:36 AM

ಸಾರಾಂಶ

ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದ ಬೇಸತ್ತ ಜನತೆ ಗ್ರಾಪಂ ಕಚೇರಿ ಎದರು ಖಾಲಿ ಕೊಡ ಹಿಡಿದು ಕರವೇ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ತಾಲೂಕಿನ ಶಿರಗಾಂವ ಗ್ರಾಮದಲ್ಲಿ ಬೇಸಿಗೆ ಹೆಚ್ಚಳದಿಂದ ನೀರಿನ ಸಮಸ್ಯೆಯಾಗುತ್ತಿದ್ದರೂ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಚಿಕ್ಕೋಡಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಪಂ ಕಚೇರಿ ಎದುರಗಡೆ ಶುಕ್ರವಾರ ಮಹಿಳೆಯರು, ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಜು ಬಡಿಗೇರ ಮಾತಾನಾಡಿ, ರಾಜ್ಯ ಸರಕಾರ ಬೆಳಗಾವಿ ಜಿಲ್ಲೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಬಾರದೆಂದು ನೂರಾರು ಕೋಟಿ ರು. ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅಧಿಕಾರಿಗಳು ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಪರಿಶೀಲಿಸದೆ, ಕಚೇರಿಯಲ್ಲಿ ಸುಮ್ಮನೆ ಕುಳಿತು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ಕೇಳಿದರೆ ಇವತ್ತು ಬರುತ್ತೆ, ನಾಳೆ ಬರುತ್ತೆ, ಬೋರ್‌ ರಿಪೇರಿ ಇದೆ, ಪೈಪ್‌ಲೈನ್‌ ಇಲ್ಲವೆಂದು ಸುಖಾಸುಮ್ಮನೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಶಿರಗಾಂವ ಗ್ರಾಮಸ್ತರಿಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆಂದು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕರವೇ ಶಿರಗಾಂವ ಘಟಕ ಅಧ್ಯಕ್ಷ ಅನೀಲ ನಾವಿ ಮಾತನಾಡಿ, ಅಧಿಕಾರಿಗಳಿಗೆ ಕಳೆದ 15 ದಿನಗಳಿಂದ ಗ್ರಾಮಸ್ಥರು ನಮಗೆ ನೀರು ಕೋಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದೆ ಉಡಾಫೆ ಉತ್ತರಗಳನ್ನು ಹೇಳಿ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವಿಷಯ ತಿಳಿದು ಶಿರಗಾಂವ ಗ್ರಾಮ ಅಧ್ಯಕ್ಷ ಜೈಬುನ ಎಸ್‌.ತಹಸೀಲ್ದಾರ್‌ ಸ್ಥಳಕ್ಕೆ ಬಂದು ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು ಹಾಗೂ ಚಿಕ್ಕೋಡಿ ತಹಸೀಲ್ದಾರ್‌ಗೆ ಸಂಪರ್ಕಿಸಿ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದರು. ತಹಸೀಲ್ದಾರ್‌ ಕೂಡಾ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು. ಬೀಬಿಜಾನ ಸಯ್ಯದ, ಮಂಗಲ ನಾವಿ, ಕಮಲಾ ಪಾಟೀಲ, ನೀಲಾಬಾಯಿ ಮಗದುಮ್ಮ, ಗೀತಾ ಕೇಸ್ತಿ, ಶಿವಕ್ಕಾ ಪಾಟೀಲ, ಅರಮಾನ ಸಯ್ಯದ, ರಾವಸಾಹೇಬ ಉದಗಟ್ಟಿ, ಶಿವಾಜಿ ಖಾಡೆ, ಸತೀಶ ಪೂಜಾರಿ, ಪುಟ್ಟು ಜಾಧವ, ಮಹಾದೇವ ಉದಗಟ್ಟಿ, ಸುರೇಶ ಮಗದುಮ್ಮ, ಶಿವಾನಂದ ಕೇಸ್ತಿ ಉಪಸ್ಥಿತರಿದ್ದರು.

Share this article