ಗದಗ: ಕ್ರೀಡೆಗಳು ಮನುಷ್ಯರಿಗೆ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ಅವರು ಗುರುವಾರ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಗದಗ, ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಅಧಿಕಾರಿಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡಾ ಕೂಟದಲ್ಲಿ ತಾವುಗಳು ಸಕ್ರೀಯವಾಗಿ ಭಾಗವಹಿಸಿ ಕ್ರೀಡೆಯಿಂದ ಶಿಸ್ತು, ಸಮಯ ಪ್ರಜ್ಞೆ, ಕ್ರೀಡಾ ಮನೋಭಾವ, ಪ್ರಾಮಾಣಿಕತೆ ಇವೆಲ್ಲವನ್ನೂ ರೂಢಿಸಿಕೊಂಡಾಗ ಮಾತ್ರ ಮಕ್ಕಳಿಗೆ ನೀವು ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು. ಒಲಿಂಪಿಕ್‌ನಲ್ಲಿ ಭಾರತ ದೇಶದ ಸಾಧನೆ ಕಳಪೆಯಾಗಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರಣವಾಗಿದೆ. ಕ್ರೀಡಾಪಟುಗಳಿಗೆ ಒಳ್ಳೆಯ ಕೌಶಲ್ಯ ಹಾಗೂ ಉತ್ತಮ ತರಬೇತಿ ಪ್ರೋತ್ಸಾಹ ನೀಡುವಲ್ಲಿ ವಿಫಲವಾಗಿವೆ.
ಈ ನಿಟ್ಟಿನಲ್ಲಿ ಸರ್ಕಾರಗಳು ಇದರ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಇದೆ. ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ಕ್ರೀಡೆಯಲ್ಲಿ ಹಿಂದೆ ಉಳಿಯಲು ಕಾರಣವಾಗಿದೆ. ತಕ್ಷಣ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಒತ್ತಾಯಿಸಿದರು. ಕ್ರೀಡಾ ಧ್ವಜಾರೋಹಣ ಮಾಡಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿ, ದೈಹಿಕ ಶಿಕ್ಷಕರಿಗೆ ಇದೆ ಮೊದಲು ಕ್ರೀಡಾ ಕೂಟ ಆಯೋಜನೆ ಮಾಡಿದೆ. ದಿನ ನಿತ್ಯದ ಒತ್ತಡದ ಬದುಕಿಗೆ ಕ್ರೀಡೆ ಸಹಕಾರಿ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಸ್ಪರ್ಧಾತ್ಮಕ ಮನೋಭಾವ ಹೊಂದಬೇಕು. ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡೆಗಳು ನಡೆದಾರ ಪ್ರೋತ್ಸಾಹ ನೀಡಲು ಶಾಲಾ ಮಕ್ಕಳು ಪಾಲ್ಗೊಳ್ಳುವಂತಾಗಬೇಕು ಎಂದರು.ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಮಾತನಾಡಿ, ನಮ್ಮ ವೃತ್ತಿ ಜೀವನದ ಒತ್ತಡ ಬದುಕಿಗೆ ಕ್ರೀಡೆ ಸಹಕಾರಿಯಾಗಿದೆ. ಇದೆ ಮೊದಲ ಬಾರಿಗೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಹಿಂದೆ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನಮ್ಮಲ್ಲಿ ಭೇದ ಭಾವದಿಂದ ಅವರಿಗೆ ಅವಕಾಶ ನೀಡಿದೆ ಇರುವದು ನನಗೆ ಬೇಸರವಾಗಿತ್ತು. ಕೊನೆಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ಅವರ ಆಸೆ ಕೈಗೂಡಿದ್ದು ಸಂತಸ ತಂದಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಪ್ರಾಚಾರ್ಯರು ಡೈಟ್ ಜಿ.ಎಲ್.ಬಾರಟಕ್ಕೆ, ಗ್ರಾಮೀಣ ಬಿಇಓ ವ್ಹಿ.ವ್ಹಿ.ನಡುವಿನಮನಿ, ಕ.ರಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವ್ಹಿ.ಎಮ್.ಹಿರೇಮಠ, ಕ.ರಾ.ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್. ಪೂಜಾರ, ದಿ.ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಬಸವರಾಜ ಬಳ್ಳಾರಿ, ರವಿರಾಜ ಪವಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ಶರಣು ಗೊಗೇರಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಂ.ಎಂ.ಹವಳದ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಂ.ಎಂ.ಕಲಹಾಳ, ತಾಲ್ಲೂಕಿನ ದೈಹಿಕ ಶಿಕ್ಷಣ ಅಧಿಕಾರಿಗಳು, ವಿವಿಧ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು. ಡಿಡಿಪಿಐ ಆರ್.ಎಸ್.ಬುರಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎಂ.ಎಸ್.ಕುಚಬಾಳ ನಿರೂಪಿಸಿದರು. ಪಿ.ಕೆ.ಅವರಡ್ಡಿ ವಂದಿಸಿದರು.