ಒಳ ಮೀಸಲಾತಿಗೆ ಒತ್ತಾಯಿಸಿ ಶಾಸಕರ ಮನೆ ಎದುರು ತಮಟೆ ಚಳವಳಿ

KannadaprabhaNewsNetwork |  
Published : Dec 15, 2024, 02:04 AM IST
14ಎಚ್‌ಪಿಟಿ2- ಹೊಸಪೇಟೆಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಶಾಸಕ ಎಚ್.ಆರ್. ಗವಿಯಪ್ಪ ಮನೆ ಎದುರು ಶನಿವಾರ ತಮಟೆ ಚಳವಳಿ ನಡೆಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ಕಾಲ ಹರಣ ಮಾಡಲು ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದೆ.

ಹೊಸಪೇಟೆ: ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಇಲ್ಲಿನ ಶಾಸಕ ಎಚ್.ಆರ್. ಗವಿಯಪ್ಪ ಮನೆ ಎದುರು ಶನಿವಾರ ತಮಟೆ ಚಳವಳಿ ನಡೆಯಿತು.

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ಕಾಲ ಹರಣ ಮಾಡಲು ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದೆ. ಈ ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ನೀಡಲಾಗಿಲ್ಲ. ಸರ್ಕಾರದ ಬಳಿ ನ್ಯಾ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಸಮಿತಿ ವರದಿ ಇದ್ದರೂ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ಸುಖಾಸುಮ್ಮನೆ ಈಗ ಆಯೋಗ ರಚನೆ ಮಾಡಿದೆ. ಒಳ ಮೀಸಲಾತಿ ಜಾರಿ ಆಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ, ಈ ಭರವಸೆ ಜಾರಿಯಾಗಿಲ್ಲ. ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸಾಮಾಜಿಕ ನ್ಯಾಯ ಎಂದು ಹೇಳುವ ಪಕ್ಷವೇ ಈಗ ಸಾಮಾಜಿಕ ನ್ಯಾಯ ಒದಗಿಸುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳ ಮೀಸಲಾತಿ ಜಾರಿಗೊಳಿಸಲು ಸೂಚಿಸಬೇಕು. ಎಂತಹ ಪ್ರಭಾವಿಗಳು ಪ್ರಭಾವ ಬೀರಿದರೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು. ಮೂರು ದಶಕಗಳ ಹೋರಾಟಕ್ಕೆ ನ್ಯಾಯ ದೊರೆಯಬೇಕಿದೆ. ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಾಡಿದೆ. ಇದರ ಲಾಭ ಎಂಜನಿಯರಿಂಗ್, ಮೆಡಿಕಲ್ ಸೀಟುಗಳ ಹಂಚಿಕೆಯಲ್ಲಿ ಆಗಿದೆ. ಇನ್ನೂ ಮೀಸಲು ಹೆಚ್ಚಳ ಜಾರಿ ಆಗಿಲ್ಲ ಎಂಬುದು ಶುದ್ಧ ಸುಳ್ಳಾಗಿದೆ. ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಬಿದ್ದಿದೆ. ಸಮಾಜ ಹೋರಾಟದ ಹಾದಿ ಹಿಡಿದಿದೆ. ಒಳ ಮೀಸಲಾತಿ ಜಾರಿಗೊಳಿಸುವುದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಆಯಾ ಜನಸಂಖ್ಯೆ ಅನುಸಾರವೇ ಮಾಧುಸ್ವಾಮಿ ಸಮಿತಿ ಆಧಾರದ ಮೇಲೆ ಹಿಂದಿನ ಸರ್ಕಾರ ವರ್ಗೀಕರಣ ಮಾಡಿದೆ. ಇದನ್ನು ಈಗಿನ ಸಿದ್ದರಾಮಯ್ಯನವರ ಸರ್ಕಾರ ಜಾರಿಗೊಳಿಸಬೇಕು ಒತ್ತಾಯಿಸಿದರು.

ಹಂಪಿಯ ಮಾತಂಗ ಮಹರ್ಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷೆ ಸುಂಕಮ್ಮ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಕೆ.ಪಿ.ಉಮಾಪತಿ, ಜಗನ್, ಶೇಷು, ವೆಂಕಪ್ಪ, ಜಗನ್ನಾಥ, ಕರಿಯಪ್ಪ,ಎಚ್‌.ಸೋಮಶೇಖರ್‌, ಎಚ್‌. ಗೋಪಾಲಕೃಷ್ಣ, ಮರಿದಾಸ, ಶ್ರೀನಿವಾಸ್‌, ಶೇಕ್ಷಾವಲಿ, ಸೇಲ್ವಂ, ಶ್ರೀನಿವಾಸ್‌, ಮಾರಣ್ಣ, ಬಸವರಾಜ, ಜಯಪ್ಪ, ವೆಂಕಟೇಶ್‌, ಭರತ್‌ಕುಮಾರ, ಕೊಟ್ಟಾಲ್‌ ವಿರೇಶ್‌, ರವಿಕುಮಾರ ಇದ್ದರು.

ಹೊಸಪೇಟೆಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಶಾಸಕ ಎಚ್.ಆರ್. ಗವಿಯಪ್ಪ ಮನೆ ಎದುರು ಶನಿವಾರ ತಮಟೆ ಚಳವಳಿ ನಡೆಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ