ಜ.೨೯ರಂದು ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ

KannadaprabhaNewsNetwork |  
Published : Jan 26, 2025, 01:33 AM IST
೨೫ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಿಸರ್ವ್‌ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವ ಭಿತ್ತಿಚಿತ್ರಗಳನ್ನು ರೈತಸಂಘದ ಕಾರ್ಯಕರ್ತರು ಪ್ರದರ್ಶಿಸಿದರು. | Kannada Prabha

ಸಾರಾಂಶ

ನಬಾರ್ಡ್‌ನ ಈ ನೀತಿಯಿಂದಾಗಿ ರಿಯಾಯ್ತಿ ದರದಲ್ಲಿ ೧೫ ಲಕ್ಷ ರು.ವರೆಗೆ ದೊರಕುತ್ತಿದ್ದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲಕ್ಕೂ ಹೊಡೆತ ಬೀಳಲಿದೆ. ಶೂನ್ಯ ಬಡ್ಡಿದರದಲ್ಲಿ ಸುಮಾರು ೩೦ ಲಕ್ಷ ರು.ವರೆಗೆ ಪಡೆಯುತ್ತಿದ್ದ ಸಾಲ ನಿಂತು ಹೋಗಲಿದೆ. ಮುಂದಿನ ದಿನಗಳಲ್ಲಿ ರೈತರು ಹೆಚ್ಚಿನ ಬಡ್ಡಿ ನೀಡಿ ವಾಣಿಜ್ಯ ಬ್ಯಾಂಕ್‌ಗಳ ಮೊರೆ ಹೋಗಬೇಕು. ಇಲ್ಲವೇ, ಖಾಸಗಿ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರಿಗೆ ನೀಡಿರುವ ಸಾಲದ ಪ್ರಮಾಣವನ್ನು ಕಡಿತಗೊಳಿಸಿರುವ ನಬಾರ್ಡ್ ನೀತಿ ವಿರೋಧಿಸಿ ಜ.೨೯ರಂದು ಕರ್ನಾಟಕ ರಾಜ್ಯ ರೈತಸಂಘ ಬೆಂಗಳೂರಿನ ರಿಸರ್ವ್‌ ಬ್ಯಾಂಕ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ನಬಾರ್ಡ್ ಕಳೆದ ವರ್ಷ ರಾಜ್ಯಕ್ಕೆ ೫೬೦೦ ಕೋಟಿ ರು. ನೀಡಿತ್ತು. ಈ ವರ್ಷ ಕೇವಲ ೨೩೪೦ ಕೋಟಿ ರು. ನೀಡಿದೆ. ಇದರಿಂದ ೫ ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಕುತ್ತು ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಬಾರ್ಡ್‌ನ ಈ ನೀತಿಯಿಂದಾಗಿ ರಿಯಾಯ್ತಿ ದರದಲ್ಲಿ ೧೫ ಲಕ್ಷ ರು.ವರೆಗೆ ದೊರಕುತ್ತಿದ್ದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲಕ್ಕೂ ಹೊಡೆತ ಬೀಳಲಿದೆ. ಶೂನ್ಯ ಬಡ್ಡಿದರದಲ್ಲಿ ಸುಮಾರು ೩೦ ಲಕ್ಷ ರು.ವರೆಗೆ ಪಡೆಯುತ್ತಿದ್ದ ಸಾಲ ನಿಂತು ಹೋಗಲಿದೆ. ಮುಂದಿನ ದಿನಗಳಲ್ಲಿ ರೈತರು ಹೆಚ್ಚಿನ ಬಡ್ಡಿ ನೀಡಿ ವಾಣಿಜ್ಯ ಬ್ಯಾಂಕ್‌ಗಳ ಮೊರೆ ಹೋಗಬೇಕು. ಇಲ್ಲವೇ, ಖಾಸಗಿ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಲದ ಸುಳಿಗೆ ರೈತ ಸಮುದಾಯಗಳು ಬಲಿಯಾದಲ್ಲಿ ಸ್ಥಿರಾಸ್ತಿಗಳು ಹರಾಜಾಗಲಿವೆ. ಈಗಾಗಲೇ ಪ್ರತಿ ೩೬ ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆಗೆ ಒಳಗಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರೈತರು ಸರಣಿ ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ. ಹೈನುಗಾರಿಕೆ, ಕೋಳಿ, ಮೀನು ಸಾಕಾಣಿಕೆ ಸೇರಿದಂತೆ ಇತರೆ ಕೃಷಿ ಪೂರ್ವಕ ಚಟುವಟಿಕೆಗಳಿಗೆ ನೀಡುತ್ತಿದ್ದ ಸಾಲದ ಸಹಾಯಧನ ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಹಲವಾರು ಡಿಸಿಸಿ ಬ್ಯಾಂಕ್‌ಗಳು, ಭೂ ಅಭಿವೃದ್ಧಿ ಬ್ಯಾಂಕ್‌ಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಭವಿಷ್ಯದಲ್ಲಿ ಸಂಪೂರ್ಣವಾಗಿ ಮುಚ್ಚಬೇಕಾಗುತ್ತದೆ. ನಬಾರ್ಡ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅವಕಾಶವಿಲ್ಲದಂತಾಗುತ್ತದೆ ಎಂದರು.

ಬಜೆಟ್ ಅಧಿವೇಶನದಲ್ಲೇ ಸುಗ್ರೀವಾಜ್ಞೆ ತನ್ನಿ:

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮತ್ತು ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ದುಡಿಯುವ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಮೇಲೆ ಯಾರೊಬ್ಬರ ಹಿಡಿತವಿಲ್ಲದಂತಾಗಿದೆ. ಮಹಿಳೆಯರು ಮರ್ಯಾದೆಗೆ ಅಂಜಿ ಊರು ತೊರೆಯುತ್ತಿದ್ದಾರೆ. ಆದರೂ ಮೈಕ್ರೋಫೈನಾನ್ಸ್‌ಗಳಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಗ್ರೀವಾಜ್ಞೆ ತರುವುದಾಗಿ ಬಾಯಿ ಮಾತಿನಲ್ಲಿ ಹೇಳಿದರೆ ಸಾಧ್ಯವಿಲ್ಲ. ಈ ಬಜೆಟ್ ಅಧಿವೇಶನದಲ್ಲೇ ಮೈಕ್ರೋಫೈನಾನ್ಸ್‌ಗಳ ಹಾವಳಿ ತಡೆಗೆ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ರಿಸರ್ವ್‌ ಬ್ಯಾಂಕ್ ಎದುರು ನಡೆಯಲಿರುವ ಬೃಹತ್ ಪ್ರತಿಭಟನೆಗೆ ಎಲ್ಲಾ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ರೈತರು, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯವರು, ಪ್ರಾಥಮಿಕ ಕೃಷಿ ಪತ್ತಿನ ಸಹಹಕಾರ ಸಂಘದವರು, ಷೇರುದಾರರು ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಲಿಂಗಪ್ಪಾಜಿ, ಬೋರಾಪುರ ಶಂಕರೇಗೌಡ, ಅಣ್ಣಯ್ಯ, ವಿಜಯಕುಮಾರ್, ಮಹೇಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ