ಶಿರಸಿ: ಶಿರಸಿ ಒಳಗೊಂಡು ಘಟ್ಟದ ಮೇಲಿನ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿ ಡಿ. ೧೬ರಂದು ಬೆಳಗಾವಿಯ ಸುವರ್ಣಸೌಧದ ಎದುರು ಬೆಳಗ್ಗೆ ೯ರಿಂದ ಸಂಜೆ ೫ ಗಂಟೆಯವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ಜಿಲ್ಲೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಶಿರಸಿ, ಬನವಾಸಿ ಮತ್ತು ಮುಂಡಗೋಡಿನ ಪೂರ್ವಭಾವಿ ಸಭೆ ಮತ್ತು ಪ್ರತಿಭಟನಾ ಮೆರವಣಿಗೆಗಳು ನಡೆದಿದೆ. ಸಾರ್ವಜನಿಕರಿಂದಲೂ ಉತ್ತಮ ಅಭಿಪ್ರಾಯ ಮತ್ತು ಬೆಂಬಲ ವ್ಯಕ್ತವಾಗಿದೆ. ಅದೇ ರೀತಿ ಸಿದ್ದಾಪುರ, ಯಲ್ಲಾಪುರ ಹಾಗೂ ಹಳಿಯಾಳದಲ್ಲಿ ಸದ್ಯದಲ್ಲಿಯೇ ಸಭೆಗಳು ನಡೆಯಲಿದೆ ಎಂದರು.
ಹೋರಾಟಕ್ಕೆ ವೇಗ ನೀಡಿ ಸರ್ಕಾರದ ಗಮನ ಸೆಳೆಯಲು ಅಧಿವೇಶನದ ವೇಳೆ ಸುವರ್ಣಸೌಧದ ಬಳಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯಲ್ಲಿ ಸಾವಿರ ಜನ ಸೇರಲಿದ್ದು, ನಮ್ಮ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುವುದು ಎಂದರು. ಪ್ರತ್ಯೇಕ ಕಂದಾಯ ಜಿಲ್ಲೆ ರಚನೆಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ರಾಜ್ಯದ ಕಂದಾಯ ಸಚಿವರು, ಶಾಸಕರು ಹೇಳುತ್ತಿದ್ದಾರೆ. ಆದರೆ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಡಿ. ೨ರಂದು ಮಹಾಕುಂಭಮೇಳ ಎಂಬ ನೂತನ ಜಿಲ್ಲೆ ಘೋಷಣೆ ಮಾಡಲಾಗಿದೆ. ಹೀಗಾಗಿ ಜಿಲ್ಲೆ ರಚನೆಗೆ ಕೇಂದ್ರದ ಅನುಮತಿ ಬೇಡ. ಆದರೆ ಜಿಲ್ಲೆ ರಚನೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಷ್ಟೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಧ್ವನಿ ಎತ್ತಬೇಕು ಎಂದರು.ಸಮಿತಿಯ ವಿ.ಎಂ. ಭಟ್ಟ ಮಾತನಾಡಿ, ಪ್ರತಿದಿನ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಹಾನಗಲ್, ಸೊರಬ, ಹಾವೇರಿಯಿಂದ ಸಾವಿರಾರು ರೋಗಿಗಳು ಬರುತ್ತಾರೆ. ತಾಲೂಕು ಆಸ್ಪತ್ರೆ ಬೇರೆ, ಶಿರಸಿಗೆ ಮಂಜೂರಿಯಾಗಿರುವ ವಿಶೇಷ ಹೈಟೆಕ್ ಆಸ್ಪತ್ರೆಯೇ ಬೇರೆ. ಕೂಡಲೇ ಸರ್ಕಾರ ಅನುದಾನ ಜಾರಿಗೊಳಿಸಬೇಕು ಎಂದರು.ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಎಂ.ಎಂ. ಭಟ್ಟ, ಗಣಪತಿ ನಾಯ್ಕ ಮಹಾದೇವ ಚಲುವಾದಿ, ಚಿದಾನಂದ ಹರಿಜನ, ಶೋಭಾ ನಾಯ್ಕ, ಜಿ.ಎಸ್. ಹೆಗಡೆ, ಶಿವಾನಂದ ದೇಶಳ್ಳಿ, ಸಂತೋಷ ನಾಯ್ಕ, ನಾಗರಾಜ ಜೋಶಿ ಸೋಂದಾ, ಸಿ.ಎಫ್. ಈರೇಶ ಮತ್ತಿತರರು ಇದ್ದರು.