ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಗಲಿಕೆ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಬಹುನಷ್ಟವಾಗಿದೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ದುಃಖ ವ್ಯಕ್ತಪಡಿಸಿದ್ದಾರೆ.ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನಮ್ಮ ತಾಯಿ ಪಾರ್ವತಮ್ಮ ಶ್ರೀಕಂಠಯ್ಯ ಅವರು ಶಾಸಕಿಯಾಗಿ ಕೆಲಸ ಮಾಡಲು ಅವಕಾಶ ದೊರಕಿತ್ತು. ಆ ವೇಳೆ ಸುಮಾರು 14 ಸಾವಿರ ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದರು. ಬೆಂಗಳೂರು- ಮೈಸೂರು ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದಜೆಗೇರಿಸಿದ್ದರಿಂದ ಈ ಭಾಗದ ಜನರ ಅಭಿವೃದ್ಧಿಗೆ ವರದಾನವಾಯಿತು. ಜೊತೆಗೆ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಕಾವೇರಿ ಪ್ರಾಧಿಕಾರ ತೆರೆದು, ಅತಿ ಹೆಚ್ಚು ನೀರಾವರಿ ಪ್ರದೇಶವನ್ನಾಗಿ ಮಾರ್ಪಡಿಸುವಲ್ಲಿ ಅವರ ಪಾತ್ರ ಪ್ರಮುಖ ಎಂದು ಸ್ಮರಿಸಿದರು.
ನಮ್ಮ ಕುಟುಂಬದ ಒಡನಾಡಿಯಾಗಿದ್ದ ಎಸ್.ಎಂ. ಕೃಷ್ಣ ಅವರು ನಮ್ಮ ತಾತ ಚುಂಚೇಗೌಡ, ತಂದೆ ಎ.ಸಿ. ಶ್ರೀಕಂಠಯ್ಯ ಹಾಗೂ ತಾಯಿ ಪಾರ್ವತಮ್ಮ ಅವರೊಂದಿಗೆ ಬಾಂಧವ್ಯ ಹೊಂದಿದ್ದರು. ಅಲ್ಲದೆ, ನನ್ನ ರಾಜಕೀಯ ಮಾರ್ಗದರ್ಶಕರಾಗಿದ್ದರು ಎಂದು ಮಾಜಿ ಶಾಸಕರು ನೆನಪಿಸಿಕೊಂಡರು.ಸಂಭಾವಿತ ಹಾಗೂ ವಿನಯವಂತಿಕೆ ರಾಜಕಾರಣಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಯಾವುದೇ ಹುದ್ದೆಗೆ ಹೋದರೂ ಆ ಹುದ್ದೆಯ ಘನತೆ ಹೆಚ್ಚಾಗುವಂತೆ ಕೆಲಸ ನಿರ್ವಹಿಸುತ್ತಿದ್ದರು. ಮುಖ್ಯಮಂತ್ರಿಗಳಾಗಿ ಈ ರಾಜ್ಯದಲ್ಲಿ ಹಲವು ಮಹತ್ತರ ಯೋಜನೆಗಳನ್ನು ಸಾಕಾರಗೊಳಿಸಿದ್ದರು. ಇಂತಹ ಜಿಲ್ಲೆಯ ಮಗನನ್ನು ಇಂದು ಕಳೆದುಕೊಂಡಿರುವುದು ಜಿಲ್ಲೆ ಮಾತ್ರವಲ್ಲ ಇಡೀ ದೇಶಕ್ಕೇ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ನಿಧನ, ತ್ರಿನೇತ್ರ ಸ್ವಾಮಿಗಳ ಸಂತಾಪ:ಶ್ರೀರಂಗಪಟ್ಟಣ:
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ನಿಧನಕ್ಕೆ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಎಸ್.ಎಂ. ಕೃಷ್ಣರವರು ನಮ್ಮ ಮಠದ ಮೇಲಿನ ಪ್ರೀತಿ ಜೊತೆಗೆ ನಮ್ಮ ಮಠದ ಬಗ್ಗೆ ಅವರ ಕಾಳಜಿ ಗುಣಗಳು ನಮಗೆ ಹಿಡಿಸಿದ್ದು, ನಾವು ಇದೀಗ ಅವನ್ನೆಲ್ಲ ನೆನಸಿಕೊಳ್ಳಬೇಕಿದೆ. ಅವರ ನಿಧನವು ನಮ್ಮ ನಾಡಿಗೆ, ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.ಇವರು ೨೦೨೩ನೇ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಜನಮೆಚ್ಚಿದ ನಾಯಕರಾಗಿ ಸಮಾಜದ ಸುಧಾರಣೆಗೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಬಹಳ ಶ್ರಮವಹಿಸಿದವರು ಎಂದು ಹೇಳಿದರು.
ಉತ್ತಮ ಓದುಗ ಮತ್ತು ಚಿಂತಕರೂ ಕೂಡ ಆಗಿದ್ದರು. 2024ರ ಜನವರಿಯಲ್ಲಿ ಚಂದ್ರವನ ಆಶ್ರಮದಲ್ಲಿ ಇವರಿಗೆ ಚಂದ್ರವನ ಸಿರಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿತ್ತು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ತಡೆಯಲು ಆ ಭಗವಂತನು ಇವರಿಗೆ ಅನುಗ್ರಹಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.