- ಬಸವರಾಜ ಬೊಮ್ಮಾಯಿ, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ
ಕಾವೇರಿ ಹೋರಾಟದ ವೇಳೆ ಅವರ ಪಕ್ಷದವರೇ ಅವರನ್ನು ಮುಳುಗಿಸುವ ಪ್ರಯತ್ನ ನಡೆಸಿದರು. ಆಗ ರಾಜ್ಯದ ಹಿತದೃಷ್ಟಿಯಿಂದ, ರೈತರ ಹಿತದೃಷ್ಟಿಯಿಂದ ಪಕ್ಷ ಭೇದ ಮರೆತು ವಿರೋಧ ಪಕ್ಷಗಳು ಅವರಿಗೆ ಬೆಂಬಲ ನೀಡಿದ್ದವು. ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ರಿಲೀಫ್ ಸಿಕ್ಕು ಕಾವೇರಿಯಲ್ಲಿ ಮುಳುಗದೇ ಪುಟಿದೆದ್ದು ಮತ್ತೆ ಎರಡು ವರ್ಷ ಅಧಿಕಾರ ನಡೆಸಿರುವುದು ಸ್ಮರಣೀಯ.
ತಾಳ್ಮೆಗೆ ಒಲಿದ ಸಿಎಂ ಸ್ಥಾನ1992-93ರಲ್ಲಿ ಅವರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹಿನ್ನಡೆಯಾಗಿತ್ತು. ಆಗ ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿದ್ದು ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಆಯಿತು. ಆಗ ತಾಳ್ಮೆ ವಹಿಸಿದ್ದರಿಂದ ಮುಂದೆ 1999ರಲ್ಲಿ ಅವರು ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. 1994ರಲ್ಲಿ ಎಸ್.ಎಂ.ಕೃಷ್ಣ ಸೋತಾಗ ರಾಜ್ಯಸಭೆ ಪ್ರವೇಶಿಸಲು ಚಿಂತಿಸಿದ್ದರು. ಆದರೆ, ಸ್ವಪಕ್ಷದವರೇ ಮತ ಹಾಕುವುದಿಲ್ಲ ಎನ್ನುವ ಆತಂಕ ಅವರಿಗೆ ಕಾಡಿತ್ತು. ಅವರಿಗೆ ಬೇಕಿದ್ದ ನಾಲ್ಕು ಮತಗಳನ್ನು ಬೇರೆ ಪಕ್ಷಗಳಲ್ಲಿನ ಅವರ ಸ್ನೇಹಿತರು ನೀಡಿದ್ದರು. ಅವರ ವಿರುದ್ಧ ಗೆದ್ದಿದ್ದ ಮದ್ದೂರಿನ ಶಾಸಕರೂ ಅವರ ಹಿರಿತನ ಹಾಗೂ ಒಳ್ಳೆಯತನ ನೋಡಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ಈ ರೀತಿಯ ಪ್ರಸಂಗ ಅತ್ಯಂತ ವಿರಳ.
ಮುಖ್ಯಮಂತ್ರಿಯಾದ ಬಳಿಕ ನನಗೆ ಕರೆ ಮಾಡಿ, ನೀನು ಹೇಳಿದ್ದು ನಿಜವಾಯಿತು. ನನಗೆ ಅನುಕೂಲವಾಯಿತು ಎಂದಿದ್ದರು. ಅವರು ಎಲ್ಲೂ ತಮ್ಮ ಇಂಟಿಗ್ರಿಟಿ, ನಿಷ್ಠೆ ಮತ್ತು ಪ್ರಾಮಾಣಿಕತೆ ಬಿಟ್ಟವರಲ್ಲ. ಎಸ್.ಎಂ.ಕೃಷ್ಣ ಅವರಿಂದ ಲಾಭ ತೆಗೆದುಕೊಂಡವರು ಬಹಳ. ಆದರೆ, ಅವರ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಸಂಖ್ಯೆ ಕಡಿಮೆ. ಇದರ ಮಧ್ಯೆಯೂ ಬೆಳೆದು ನಿಂತು ಧೀಮಂತಿಕೆ ಮೆರೆದಿದ್ದಾರೆ.ಎಂಜಿಆರ್ ರೀತಿ ಬಿಸಿಯೂಟ ಯೋಜನೆ
ರೈತರಿಗೆ ಆ ಕಾಲದಲ್ಲಿ ಯಾವುದೇ ವಿಮೆ ಯೋಜನೆ ಇರಲಿಲ್ಲ. ರೈತರ ಅನಾರೋಗ್ಯದ ವೇಳೆ ನೆರವಾಗಲೆಂದು ಸರ್ಕಾರವೇ ವಿಮೆ ಹಣ ಕಟ್ಟುವ ಯಶಸ್ವಿನಿ ಯೋಜನೆಯಡಿ ಹಣಕಾಸು ವ್ಯವಸ್ಥೆಯಾಗುವ ಯೋಜನೆ ಮಾಡಿದ್ದರು. ಆರಂಭದಲ್ಲಿ ₹60 -₹70 ಕೋಟಿ ವೆಚ್ಚ ಆಗುತ್ತಿತ್ತು. ದುರ್ದೈವವೆಂದರೆ, ಮುಂದೆ ಬಂದ ಸರ್ಕಾರಗಳು ಅದನ್ನು ಮುಂದುವರೆಸಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಿದ್ದೆ. ಅವರು ರೂಪಿಸಿದ ಯೋಜನೆಯಿಂದ ರೈತರಿಗೆ ಅನುಕೂಲವಾಗಿದ್ದು ಕಂಡು ಮರು ಜಾರಿ ಮಾಡಿದ್ದೆ.
ನಮ್ಮ ತಂದೆ ಹಾಗೂ ಎಸ್.ಎಂ ಕೃಷ್ಣ ಆತ್ಮೀಯರು ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅವರು ಲೋಕಸಭಾ ಸದಸ್ಯರಾಗಿದ್ದಾಗ ಇವರು ವಿಧಾನಸಭೆ ಪ್ರವೇಶ ಮಾಡಿದ್ದರು. ಒಮ್ಮೆ ನಮ್ಮ ಮನೆಗೆ ಬಂದಿದ್ದಾಗ ತಂದೆಯ ಮುಂದೆ ‘ನಿಮ್ಮ ಮಗ ಒಳ್ಳೆಯ ಸಂಸದೀಯ ಪಟು. ಅವರಿಗೆ ಒಳ್ಳೆಯ ಭವಿಷ್ಯ ಇದೆ. ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಂಡು ದೊಡ್ಡ ಹುದ್ದೆ ಕೊಡುತ್ತೇನೆ’ ಎಂದು ಅಭಿಮಾನದಿಂದ ಪ್ರೀತಿಯ ಮಾತು ಹೇಳಿದ್ದರು. ಈ ಮಾತು ನಾನು ಸಂಸದೀಯಪಟುವಾಗಿ ಮಾಡಿದ ಕೆಲಸಕ್ಕೆ ಸರ್ಟಿಫಿಕೆಟ್ ಸಿಕ್ಕಂತಾಗಿತ್ತು.
ಕೃಷ್ಣ ಅವರದು ವರ್ಣ ರಂಜಿತ ವ್ಯಕ್ತಿತ್ವ. ಅವರು ತೊಡುವ ವಸ್ತ್ರ ಎಷ್ಟು ಸ್ವಚ್ಛವಾಗಿತ್ತೋ ಅವರ ಗುಣ, ವ್ಯಕ್ತಿತ್ವವೂ ಅಷ್ಟೇ ಸ್ವಚ್ಛವಾಗಿತ್ತು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಅವರ ಸಿಬ್ಬಂದಿ ಭೇಟಿಗೆ ಸಮಯ ಕೊಟ್ಟಿರಲಿಲ್ಲ. ಅದನ್ನು ತಿಳಿದು ಖುದ್ದು ತಾವೇ ಕರೆ ಮಾಡಿ ತಮ್ಮ ನಿವಾಸಕ್ಕೆ ನನ್ನನ್ನು ಕರೆಸಿಕೊಂಡು ಊಟ ಹಾಕಿ ಸುಮಾರು ಮೂರು, ನಾಲ್ಕು ಗಂಟೆಗಳ ಕಾಲ ಹರಟೆ ಹೊಡೆದಿದ್ದು ಅವರ ಔದಾರ್ಯಕ್ಕೆ, ಕನ್ನಡ ಅಭಿಮಾನಕ್ಕೆ ಸಾಕ್ಷಿ.ಸಂಯಮದ ನಿರ್ಧಾರ
ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ. ದೇಶ, ವಿದೇಶದಲ್ಲಿ, ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಕರ್ನಾಟಕ ಹೆಮ್ಮೆಪಡುವಂತೆ ಕೆಲಸ ಮಾಡಿದ್ದಾರೆ. ಸಮಕಾಲಿನ ರಾಜಕಾರಣದಲ್ಲಿ ಅವರಂಥ ನಾಯಕನ ಬಹಳ ಅವಶ್ಯಕತೆ ಇದೆ. ಅವರು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ತಮ್ಮ ಜೀವನದ ಕುರಿತು ನಾಲ್ಕು ಸಂಪುಟಗಳಲ್ಲಿ ಬರೆದಿರುವ ಪುಸ್ತಕಗಳಲ್ಲಿ ಅವರ ಜೀವನದ ಆದರ್ಶಗಳ ಬಗ್ಗೆ ಮಾಹಿತಿ ಇದೆ. ಅದನ್ನು ಓದಿಕೊಂಡು ಆ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.