ಕನ್ನಡ ನಾಡಿನ ಹಿರಿಮೆಯ ರಾಜಕಾರಣಿ, ದೂರದೃಷ್ಠಿಯ ಮುತ್ಸದ್ಧಿ ಎಸ್ಎಂಕೆ

KannadaprabhaNewsNetwork | Published : Dec 11, 2024 12:45 AM

ಸಾರಾಂಶ

ಸಿಂಹಾಸನಾರೋಹಣ ಮಾಡಿರುವ ತರಳಬಾಳು ಶ್ರೀಗಳ ಜೊತೆಗೆ ಮಾಜಿ ಸಿಎಂ ಎಸ್.‌ಎಂ.ಕೃಷ್ಣ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಕನ್ನಡ ನಾಡಿಗೆ ಘನತೆ ಮತ್ತು ರಾಜ್ಯದ ರಾಜಕಾರಣಕ್ಕೆ ದೂರದೃಷ್ಟಿಯನ್ನು ತಂದುಕೊಟ್ಟ ಮಾಜಿ ಮುಖ್ಯಮಂತ್ರಿ ಎಸ್.‌ಎಂ. ಕೃಷ್ಣ ಅವರ ನಿಧನಕ್ಕೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್.‌ಎಂ.ಕೃಷ್ಣ ದೂರದೃಷ್ಠಿಯ ನಾಯಕರಾಗಿದ್ದು, ರಾಜಕಾರಣದಲ್ಲಿ ಅವರೊಬ್ಬ ಮುತ್ಸದ್ಧಿ ನಾಯಕನ ರೀತಿಯಲ್ಲಿ ಎಲ್ಲರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಅವರು ಹಾಕಿಕೊಟ್ಟ ದಾರಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಕರ್ನಾಟಕವನ್ನು ತಾಂತ್ರಿಕತೆಯಲ್ಲಿ ವಿಭಿನ್ನರೀತಿಯಲ್ಲಿ ಎತ್ತರಕ್ಕೆ ತಗೆದುಕೊಂಡು ಹೋದವರು ಎಸ್‌.ಎಂ.ಕೃಷ್ಣ.

ಬೆಂಗಳೂರು ಮಹಾನಗರಿಗೆ ಸಿಲಿಕಾನ್‌ ಸಿಟಿಯ ಗರಿ ತಂದುಕೊಟ್ಟವರು ಅವರು.

ಆಡಳಿತದಲ್ಲಿ ಕಂಪ್ಯೂಟರ್‌ನ್ನು ಯಶಸ್ವಿಯಾಗಿ ಬಳಸಿಕೊಂಡು ಮುನ್ನಲೆಗೆ ಬಂದಿದ್ದರು. ನಂತರ ಭಾರತ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀಗಳು ಬಣ್ಣಿಸಿದರು.

ಎಸ್‌.ಎಂ.ಕೃಷ್ಣ ಅವರು, ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಅದರ ಸಾಮಾಜಿಕ ಕಾರ್ಯಗಳ ಕುರಿತು ಅಪಾರ ಶ್ರದ್ಧೆ ಮತ್ತು ಗೌರವ ಇಟ್ಟುಕೊಂಡಿದ್ದರು. ತರಳಬಾಳು ಹುಣ್ಣಿಮ ಮಹೋತ್ಸವದಲ್ಲಿ ಹಲವು ಬಾರಿ ಪಾಲ್ಗೊಂಡು ತರಳಬಾಳು ಶ್ರೀಗಳ ಸಾಮಾಜಿಕ ಬದ್ಧತೆಯನ್ನು ಕೊಂಡಾಡಿದ್ದರು.

ರಾಜ್ಯದ ಹಲವು ಸಂಕಷ್ಟಗಳನ್ನು ಬಗೆಹರಿಸಿದ ಕೀರ್ತಿ ಎಸ್.‌ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ. ಸಮಚಿತ್ತ ಮನಸ್ಸಿನ ರಾಜಕಾರಣಿಯಾಗಿದ್ದ ಅವರು ರಾಜ್ಯದಲ್ಲಿ ತಲೆದೋರಿದ ಕಾವೇರಿ ಚಳುವಳಿ, ಬರಗಾಲದ ವಿಷಮ ಪರಿಸ್ಥಿತಿ ಹಾಗೂ ವರನಟ ರಾಜಕುಮಾರ್‌ ಅಪಹರಣದಂತಹ ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಿದ ರೀತಿಯಿಂದ ಕನ್ನಡಿಗರ ಹೃದಯ ಗೆದ್ದಿದ್ದರು. ಅವರೊಬ್ಬ ಅಧ್ಯಯನಶೀಲ ರಾಜಕಾರಣಿಯಾಗಿದ್ದರು. ಮಾತಿನಲ್ಲಿ ಸ್ಪಷ್ಟತೆ ಇತ್ತು. ಪ್ರಗತಿಯ ಕಡೆ ಮುಖಮಾಡಿ ನಿಲ್ಲುವಂತ ಗುಣ ಅವರಲ್ಲಿತ್ತು ಎಂದು ಶ್ರೀಗಳು ಹೇಳಿದ್ದಾರೆ.

ಮಠದೊಂದಿಗೆ ದೀರ್ಘ ಕಾಲದಿಂದಲೂ ಸಂಪರ್ಕ ಹೊಂದಿದ್ದ ಕೃಷ್ಣಾರವರು ಸಿಎಂ ಆದ ಸಂದರ್ಭದಲ್ಲಿ ನಿರಂತರವಾಗಿ ಮಠದ ಮಾರ್ಗದರ್ಶನ ಪಡೆಯುತ್ತಿದ್ದರು. ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವಗಳಲ್ಲಿ ಹಲವು ಬಾರಿ ಪಾಲ್ಗೊಂಡಿದ್ದರು. ಅರಸೀಕೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಗುಜರಾತಿನಲ್ಲಿ ಭೂಕಂಪದಿಂದ ಅನಾಹುತ ಸಂಭವಿಸಿತ್ತು. ಪರಂಪರೆಯಂತೆ 9ದಿನಗಳು ನಡೆಯಬೇಕಿದ್ದ ಅರಸೀಕೆರೆ ಹುಣ್ಣಿಮೆಯನ್ನು ಗುಜಾರಾತಿನ ಭೂಕಂಪದ ನೋವಿಗೆ ಮಿಡಿಯುವ ಕಾರ್ಯಕ್ರಮವನ್ನಾಗಿ ರೂಪಿಸಿ ಮಹೋತ್ಸವದ ಕೊನೆಯ ದಿನ ಪಲ್ಲಕ್ಕಿ ಉತ್ಸವವನ್ನು ರದ್ದುಗೊಳಿಸಿ, ನಾವು ಉತ್ಸವದ ಬದಲಾಗಿ ಅರಸೀಕೆರೆಯ ಬೀದಿಗಳಲ್ಲಿ ಸಂಚರಿಸಿ ನಿಧಿ ಸಂಗ್ರಹಿಸಿ ಸಂತಸ್ತ್ರರಿಗೆ ಕಳುಹಿಸಿದಾಗ ಅವರು ಸಹ ಅಂದಿನ ದಿನದ ರಾತ್ರಿ ಕಾರ್ಯಕ್ರಮದಲ್ಲಿ ತಮ್ಮ ಧರ್ಮಪತ್ನಿ ಪ್ರೇಮಾ ಅವರೊಂದಿಗೆ ಭಾಗವಹಿಸಿ ಮಠದ ಸಾಮಾಜಿಕ ಕಳಕಳಿಯನ್ನು ಪ್ರತ್ಯಕ್ಷವಾಗಿ ಕಂಡಂತಾಯಿತು ಎಂದು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಮ್ಮ ಸಂಕಲ್ಪದಂತೆ ಹೊನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ನೆರವಾಗಿದ್ದರು. ಒಮ್ಮೆ ಅವರು ಯಾತ್ರೆಯ ಸಂದರ್ಭದಲ್ಲಿ ಮಠಕ್ಕೆ ಆಶೀರ್ವಾದ ಪಡೆಯಲು ಆಗಮಿಸುವುದಾಗಿ ಬಯಕೆ ವ್ಯಕ್ತಪಡಿಸಿದಾಗ. ಪೂರ್ವ ನಿಗದಿಯಂತೆ ನಾವು ವಿದೇಶದಲ್ಲಿರುವುದಾಗಿ ತಿಳಿಸಿದರೂ ಸಹ ಸಾವಿರಾರು ಸಂಖ್ಯೆ ಜನರೊಂದಿಗೆ ಆಗಮಿಸಿ ನಮ್ಮ ಅನುಪಸ್ಥಿತಿಯಲ್ಲಿ ಲಿಂಗೈಕ್ಯ ಗುರುವರ್ಯರ ಗದ್ದುಗೆಗೆ ಆಗಮಿಸಿ ಭಕ್ತಿ ಗೌರವ ಸಮರ್ಪಿಸಿದ್ದು ಅವರು ಮಠದ ಮೇಲೆ ಇಟ್ಟಿದ್ದ ಪೂಜ್ಯ ಭಾವನೆಯನ್ನು ಅನಾವರಣಗೊಳಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಎಸ್‌.ಎಂ.ಕೃಷ್ಣಾ ಅವರು ರಾಜಕಾರಣದಲ್ಲಿ ಅತ್ಯಂತ ಶಾಂತ ಸ್ವಭಾವದ, ಸಜ್ಜನ, ಕೃಷ್ಣ ಪರಿಶುಭ್ರತೆಗೆ ಮಾದರಿಯಾದವರು. ವಿಶ್ವಬಂಧು ಮರುಳಸಿದ್ಧ, ಬಸವಾದಿ ಶರಣರು, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂತಾಪ ವ್ಯಕ್ತಪಡಿಸಿದರು.

Share this article