ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬಹಳ ಹಿಂದಿನಿಂದಲೂ ರೈತರು ಇನಾಂ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಪ್ರಭಾವಿ ಜಮೀನುದಾರರಿಗೆ ಸಹಾಯ ಮಾಡುತ್ತಾ ಅಮಾಯಕರ ಮೇಲೆ ಸುಳ್ಳು ದೂರು ದಾಖಲು ಮಾಡಿಕೊಂಡಿರುವುದನ್ನು ಖಂಡಿಸಿ ಮಾರ್ಗೋನಹಳ್ಳಿಯ ನೂರಾರು ರೈತರು ಕಿಕ್ಕೇರಿ ಪೊಲೀಸ್ ಠಾಣೆ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.ಗ್ರಾಮದ ರೈತರು ಪೊಲೀಸ್ ಠಾಣೆ ಆವರಣದಲ್ಲಿ ಧರಣ ಕುಳಿತು ವಿವಾದಿತ ಜಮೀನಿನ ಹಕ್ಕಿಗಾಗಿ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ಧಾವೆ ಹೂಡಲಾಗಿದೆ. ರೈತರಿಗೆ ರಕ್ಷಣೆ ಕೊಡಲು ಪೊಲೀಸರು ಮುಂದಾಗದೆ ತಮ್ಮ ವಿರುದ್ಧ ಸುಳ್ಳು ಕೇಸು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಕುಳಿತು ಶಾಸಕ ಎಚ್.ಟಿ.ಮಂಜು ಬೆಂಬಲ:ಧರಣಿ ಕುಳಿತಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಇಡೀ ಗ್ರಾಮದ ರೈತರ ಅನ್ನ ಕಿತ್ತುಕೊಳ್ಳಲಾಗುತ್ತಿದೆ. ಇವರು ಉಗ್ರಗಾಮಿಗಳಲ್ಲ ಅನ್ನದಾತರು. ಆಗಿರುವ ಅನ್ಯಾಯ ಸರಿಪಡಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು. ತಾನು ರೈತರ, ನ್ಯಾಯ ಪರವಾಗಿದ್ದೇನೆ. ಸ್ಥಳಕ್ಕೆ ಮೇಲಾಧಿಕಾರಿಗಳು ಆಗಮಿಸಬೇಕು. ಸೂಕ್ತ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ಗೋಮಾಳ(ಇನಾಂ)ಜಮೀನನ್ನು ಬೇಸಾಯ ಮಾಡುತ್ತಿರುವ ರೈತರಿಗೆ ತಿಳಿಯದಂತೆ ಬರೋಬ್ಬರಿ 95.13 ಎಕರೆ ಜಮೀನನ್ನು ಒಂದು ದಿನವೂ ಬೇಸಾಯ ಮಾಡದೇ ಇರುವ ಸ್ವಾಧೀನದಲ್ಲೇ ಇಲ್ಲದ ಬಲಾಢ್ಯ ಶ್ರೀಮಂತ ವ್ಯಕ್ತಿಗೆ ಮಂಜೂರು ಮಾಡಿಕೊಡುವ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಧಾವೆ ಹೂಡಲಾಗಿದೆ. ಪ್ರಭಾವಿ ವ್ಯಕ್ತಿ ವಕೀಲರಾಗಿದ್ದು, ತಮ್ಮಜೀವಿತಾವಧಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ರೈತರಿಗೆ ಮೋಸ ಮಾಡಲಾಗಿದೆ ಎಂದು ರೈತ ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯವರು ಉಳಿಕೆ ಇರುವ ಸುಮಾರು 13 ಎಕರೆ ಗೋಮಾಳದ ಭೂಮಿ ಇದ್ದು, ಇದೂ ಕೂಡ ಅನುಭವಿದಾರರಾದ ರೈತರಿಗೆ ಖಾತೆ ಆಗಿಲ್ಲ. ಗ್ರಾಮದ ಸರ್ವೇ ನಂ.165 (13 ಹಳೆ ನಂಬರ್) ರಲ್ಲಿ ಸುಮಾರು 113.13 ಎಕರೆ ಗೋಮಾಳವಿದೆ. ಗ್ರಾಮದ ನೂರಾರು ರೈತರು ತಲಾ ಒಂದೆರಡು ಎಕರೆಯಂತೆ ಸುಮಾರು 60 ವರ್ಷದಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಇಷ್ಟಾದರೂ ಕಂದಾಯ ಇಲಾಖೆಯವರು ಮಂಡ್ಯದ ವಕೀಲ ದಿ. ಡಿ. ರಾಮಲಿಂಗಯ್ಯನವರ ಹೆಸರಿಗೆ 95.13 ಎಕರೆ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾಡಿಕೊಟ್ಟಿರುವುದು ಸರಿಯಲ್ಲ ಎಂದು ದೂರಿದರು.ರೈತ ಶಿವೇಗೌಡ ಮಾತನಾಡಿ, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇವರ ಮಗ ಆರಕ್ಷಕ ಇಲಾಖೆ ಅಧಿಕಾರಿಯಾಗಿದ್ದು, ಇಲ್ಲಸಲ್ಲದ ಆರೋಪ ಹಾಕಿ ಯಾವುದೇ ಗಲಾಟೆ ಮಾಡದ ಗ್ರಾಮದ ಅಮಾಯಕ 32 ರೈತರ ವಿರುದ್ಧ ಸುಳ್ಳು ಕೇಸನ್ನು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ಸಮಗ್ರ ತನಿಖೆ ಆಗುವವರಿಗೆ ಜಾಗ ಬಿಟ್ಟು ಕದಲುವುದಿಲ್ಲ. ಜಿಲ್ಲಾಧಿಕಾರಿ, ಎಸ್‌ಪಿ, ತಹಸೀಲ್ದಾರ್, ಡಿವೈಎಸ್‌ಪಿ ಸ್ಥಳಕ್ಕೆ ಆಗಮಿಸಿ ನ್ಯಾಯ ಕೊಡಿಸಿ ಅಮಾಯಕ ರೈತರಿಗೆ ರಕ್ಷಣೆ ನೀಡಬೇಕು ಎಂದು ಪಟ್ಟು ಹಿಡಿದರು.ಸ್ಥಳದಲ್ಲಿಯೇ ರೈತರು ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡಿದರು. ನ್ಯಾಯಕ್ಕಾಗಿ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಪ್ರತಿಭಟನಾಕಾರರು ಪೊಲೀಸ್‌ಠಾಣೆಗೆ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ರೈತರನ್ನು ತಡೆದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಯುವ ಕಾರ್ಯದರ್ಶಿ ಬಿ.ಎಂ.ಕಿರಣ್, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಸದಸ್ಯ ಮಧುಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸದಸ್ಯ ಶೇಖರ್, ಎಂ.ಟಿ.ರಮೇಶ್, ರಾಜಶೇಖರ್, ಕಾಳೇಗೌಡ,ಶಿವಣ್ಣ, ಮಂಜು, ಚಂದ್ರು, ಸ್ವಾಮಿ, ಶಂಕರ್, ರಮೇಶ್, ಮುಂತಾದವರು ಇದ್ದರು.