ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ರೈತರು ಮೊದಲು ಪಟ್ಟಣದ ಸೆಸ್ಕ್ ಕಚೇರಿ ಎದುರು ಪ್ರತಿಭಟಿಸಿದರು. ಬಳಿಕ ಅಲ್ಲಿಂದ ಮೆರವಣಿಗೆಯ ಮೂಲಕ ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಿ ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ಅವರಿಗೆ ಆಕ್ಷೇಪಣೆ ಪತ್ರ ಸಲ್ಲಿಸಿದರು. ಪ್ರತಿಭಟನೆಯ ವೇಳೆ ಖಾಸಗಿ ಬಸ್ ನಿಲ್ದಾಣದ ಸಮೀಪ ಮಾನವ ಸರಪಳಿ ರಚಿಸಿದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸೆಸ್ಕ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ಜನಸಂಖ್ಯೆಯ ಶೇ. 60 ಕ್ಕೂ ಹೆಚ್ಚು ಮಂದಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಳ್ಳಿಗಳು ದೇಶದ ಆತ್ಮವಾಗಿದ್ದರೆ ಕೃಷಿಯು ದೇಶದ ಆರ್ಥಿಕ ವ್ಯವಸ್ಥೆಯ ಜೀವಾಳವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿ ಮತ್ತು ಗ್ರಾಮೀಣ ಬದುಕಿನ ಹಿತಾಸಕ್ತಿಯನ್ನು ಕಡೆಗಣಿಸಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದು ರೈತ ಸಮುದಾಯಕ್ಕೆ ದೊಡ್ಡ ಹೊಡೆತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿದ್ಯುತ್ ಖಾಸಗೀಕರಣ ಯೋಜನೆಯು ಕೃಷಿ ವಲಯಕ್ಕೆ ಮರಣ ಶಾಸನವಾಗಲಿದೆ. ಇದರ ಭಾಗವಾಗಿ ರಾಜ್ಯದ 19 ಜಿಲ್ಲೆಗಳ ಸಂಪೂರ್ಣ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಯಾದ ಟಾಟಾ ಪವರ್ಗೆ ವಹಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ವಿದ್ಯುತ್ ಕ್ಷೇತ್ರ ಖಾಸಗಿ ಕಂಪನಿಗಳ ಪಾಲಾದರೆ ಲಾಭವೇ ಮುಖ್ಯ ಗುರಿಯಾಗುವುದರಿಂದ ರೈತರ ಹಿತಾಸಕ್ತಿ ಕಡೆಗಣನೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಂಕರ್, ರಾಜಶೇಖರ, ನಾರಾಯಣ, ಹುಚ್ಚೇಗೌಡ, ಮಹೇಶ್, ನಂಜುಂಡಸ್ವಾಮಿ, ಕೆಂಚಣ್ಣ, ಮಹಾದೇವ, ಶಿವಮಲ್ಲಪ್ಪ, ಪ್ರದೀಪ್ ಕುಮಾರ್, ಸಿದ್ದಪ್ಪ,ತಲಕಾಡು ದಿನೇಶ್, ಶಾಂತಮೂರ್ತಿ, ಮಹೇಶ್, ಅಂದಾನಿ, ಮಹದೇವಸ್ವಾಮಿ, ಶೇಖರ, ಚಂದ್ರು, ನಾಗರಾಜಪ್ಪ ಇದ್ದರು.