ದ್ವೇಷ ಭಾಷಣ ವಿಧೇಯಕ ವಿರೋಧಿಸಿ ಗದಗದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Dec 25, 2025, 02:15 AM IST
ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಜಾರಿಗೆ ತರುವುದನ್ನ ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಜಾರಿಗೆ ತರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗದಗ: ರಾಜ್ಯ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಜಾರಿಗೆ ತರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ 19 (1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಇದರಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರೀಗೌಡ್ರ ಮಾತನಾಡಿ, ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ, ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳುಮಟ್ಟದ ಕಾಯಿದೆ ನಮಗೆ ಬೇಕೇ ಎಂಬ ಪ್ರಶ್ನೆ ಮೂಡಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಈ ವಿಧೆಯಕದಡಿ ಪ್ರತಿಬಂಧಕ ಕ್ರಮಗಳನ್ನು ಸಹ ಉಲ್ಲೇಖಿಸಲಾಗಿದೆ. ಪೊಲೀಸರು ಅಥವಾ ಅಧಿಕಾರಿಗಳು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳು ಸಭೆಗಳು ಅಥವಾ ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶ ಇದ್ದಂತಿದೆ. ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂತಹ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಒತ್ತಾಯಿಸಿದರು.

ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಹಾಗೂ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ ಭಾವನಾತ್ಮಕ ಹಾನಿ ಎಂದು ಆರೋಪಿಸಿ ಬಂಧನ ಮಾಡಲು ಇದು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಪತ್ರಕರ್ತರ ತನಿಖಾ ವರದಿಗಳು ಕೇಸಿನ ತೂಗುಗತ್ತಿ ಎದುರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ಅಥವಾ ಟೀಕೆಯನ್ನು ದ್ವೇಷ ಎಂದು ಕರೆದು ಬ್ಲಾಕ್ ಮಾಡಬಹುದು; ಕಾನೂನು ಕ್ರಮಕೈಗೊಳ್ಳಬಹುದು. ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿಯನ್ನು ನಿರ್ಬಂಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಈ ದೇಶದ ನಾಗರಿಕರ ಸಂವಿಧಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾನೂನು ನಾಗರಿಕರ ಸ್ವಾತಂತ್ರ‍್ಯ ಕಿತ್ತುಕೊಳ್ಳುತ್ತದೆ; ಹೀಗಾಗಿ ಇದನ್ನು ಜಾರಿಯಾಗಲು ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು.

ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿದರು. ಪ್ರಮುಖರಾದ ಬಿ.ಎಸ್. ಚಿಂಚಲಿ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ಅನಿಲ ಅಬ್ಬಿಗೇರಿ, ಅಶೋಕ ಕುಡತಿನಿ, ದಶರಥರಾಜ ಕೊಳ್ಳಿ, ಚಂದ್ರು ತಡಸದ, ಶಿವು ಹಿರೇಮನಿಪಾಟೀಲ, ಅಮರನಾಥ ಗಡಗಿ, ಸುರೇಶ ಮರಳಪ್ಪನವರ, ಸುರೇಶ ಚಿತ್ತರಗಿ, ಶಂಕರ ಕಾಕಿ, ಮಾಂತೇಶ ನಲವಡಿ, ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಸಂತೋಷ ಅಕ್ಕಿ, ವಿಜಯಲಕ್ಷ್ಮೀ ಮಾನ್ವಿ, ಮಹಾದೇವಪ್ಪ ಚಿಂಚಲಿ, ವೈ.ಪಿ. ಅಡ್ನೂರ, ಬಸವರಾಜ ಬಡಿಗೇರ, ಮಹಾಂತೇಶ ಬಾತಾಖಾನಿ, ವಿಶ್ವನಾಥ ಹಳ್ಳಿಕೇರಿ, ಮುತ್ತಣ್ಣ ಮೂಲಿಮನಿ, ಮಹೇಶ ಕಮ್ಮಾರ, ರಮೇಶ ಸಜ್ಜಗಾರ, ಶಂಕರ ಕಾಕಿ, ಶಂಕರ ಕರಿಬಿಷ್ಠಿ, ಮಹೇಶ ಶಿರಹಟ್ಟಿ, ರಾಚಯ್ಯ ಹೊಸಮಠ, ಅಪ್ಪಣ್ಣ ಟೆಂಗಿನಕಾಯಿ, ನಾಗರಾಜ ಮದ್ನೂರ, ಕವಿತಾ ಬಂಗಾರಿ, ಸುಮಂಗ ತಕ್ಕಲಕೋಟಿ, ಲಲಿತಾ ಉಮಚಗಿ, ಬಸವರಾಜ ನರೇಗಲ್, ವಿನಾಯಕ ಹೊರಕೇರಿ, ವೀರೇಶ ಗದಗಿನ, ನವೀನ ಕುರ್ತಕೋಟಿಮಠ, ಛಗನ ರಾಜಪುರೋಹಿತ್, ಸುರೇಶ ಚವಾಣ, ಮೋಹನ ಕೋರಿ, ಸಂಜೀವ ಖಟವಟೆ, ವಸಂತ ಹಬೀಬ, ಬಸಯ್ಯ ಸಾಸ್ವಿಹಳ್ಳಿಮಠ, ಲಕ್ಷ್ಮಣ ರಣತೂರ, ಡಿ.ಬಿ. ಕರೀಗೌಡ್ರ, ಅಪ್ಪು ನಮಸ್ತೆಮಠ, ವಿನೋದ ಹಂಸನೂರ ಹಾಗೂ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರೀತಿಗೆ ಮನಸೋತ ವೃದ್ಧಾಶ್ರಮದ ವೃದ್ಧರು
ದ್ವೇಷ ಭಾಷಣದ ಹೆಸರಿನಲ್ಲಿ ರಾಜ್ಯ ಸರ್ಕಾರ ವಾಕ್ ಸ್ವಾತಂತ್ರ್ಯ ಹರಣ