ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : Nov 26, 2025, 03:00 AM IST
ಪ್ರತಿಭಟನೆ | Kannada Prabha

ಸಾರಾಂಶ

ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ 40,000 ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್‌ಓ)ಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಎಐಡಿಎಸ್‌ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕರ್ನಾಟಕ ಪಬ್ಲಿಕ್ ಶಾಲೆಗಳ-ಮ್ಯಾಗ್ನೆಟ್ ಶಾಲೆಗಳ ಯೋಜನೆ ಎಂಬ ವಂಚನೆಯ ಮುಖವಾಡದ ಅಡಿಯಲ್ಲಿ ಸರ್ಕಾರವು ರಾಜ್ಯದಾದ್ಯಂತ 40, 000 ಕ್ಕೂ ಹೆಚ್ಚು ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಗುಣಮಟ್ಟ ಮತ್ತು ಮಾದರಿ ಶಾಲೆಗಳು ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಕಷ್ಟಪಟ್ಟು ಗಳಿಸಿದ ವ್ಯವಸ್ಥೆಯನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.ಕೇವಲ ಕೆಪಿಎಸ್ ಶಾಲೆಯಿಂದ ಸಮಸ್ಯೆಯಿಲ್ಲ. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯುವ ಕೆಪಿಎಸ್-ಮ್ಯಾಗ್ನೆಟ್ ಶಾಲೆ ಅತ್ಯಂತ ಅಪಾಯಕಾರಿಯಾಗಿದೆ. ಏಕೆಂದರೆ, ಕರ್ನಾಟಕದಲ್ಲಿ ಒಟ್ಟು 49, 600 ಸರ್ಕಾರಿ ಶಾಲೆಗಳಿದೆ. 30, 000 ಗ್ರಾಮಗಳಿರುವ ನಮ್ಮ ರಾಜ್ಯದಲ್ಲಿ ಕೇವಲ 5, 900 ಗ್ರಾಮ ಪಂಚಾಯಿತಿಗಳಿದೆ. ಸರ್ಕಾರದ ಯೋಜನೆಯ ಪ್ರಕಾರ ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ 5,900 ಶಾಲೆಗಳು ಮಾತ್ರ ಉಳಿಯುತ್ತದೆ. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ, ಕಕ್ಕಾಬ್ಬೆ, ಬೆಟ್ಟಗೆರೆ, ಮತ್ತು ಭಾಗಮಂಡಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಘಟನೆಯ ಜಿಲ್ಲಾ ಸಂಚಾಲಕಿ ಸ್ವಾತಿ ಮಾತನಾಡಿ, ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1ರಿಂದ 5 ಕಿ.ಮೀ. ವ್ಯಾಪ್ತಿಯ 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಚಿಕ್ಕಪುಟ್ಟ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ ಎನ್ನಲಾಗಿದೆ. ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಿದೆ. ಆದರೆ, ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾಸ್ತವತೆ ಹೀಗಿರುವಾಗ 6-7 ಕಿಮೀ ದೂರದ ಶಾಲೆಯನ್ನು ತಲುಪಲಾಗದೆ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.ಈ ಯೋಜನೆಗೆ ಏಷಿಯನ್ ಡೆವಲಪೈಂಟ್ ಬ್ಯಾಂಕಿನಿಂದ ಈಗಾಗಲೇ 2,500 ಕೋಟಿ ಸಾಲ ಪಡೆದಿರುವ ಮತ್ತು 10, 000 ಕೋಟಿ ಸಾಲ ಪಡೆಯಲಿರುವ ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಕಿಡಿಕಾರಿದ ಅವರು, ಶಾಲೆಗಳನ್ನು ರಕ್ಷಿಸಲು ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕರು ಮತ್ತು ಪೋಷಕರು ಒಂದಾಗಬೇಕೆಂದು ಕರೆ ನೀಡಿದರು. ಸಂಘಟನೆಯಿಂದ ಇದೇ ಸಂದರ್ಭ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ಎಐಡಿಎಸ್‌ಓ ಸಂಘಟನೆಯ ಜಿಲ್ಲಾ ಸಹ ಸಂಚಾಲಕಿ ಸ್ವಾತಿ, ಅಂಜಲಿ ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ