ವಕ್ಫ್‌ ಕಾಯ್ದೆ ವಿರೋಧ ಹೆಸರಲ್ಲಿ ಹಿಂದುಗಳ ಮೇಲೆ ದೌರ್ಜನ್ಯ: ಸೂರಜ್‌ ಕುಮಾರ್‌

KannadaprabhaNewsNetwork |  
Published : Apr 25, 2025, 11:51 PM IST
ಮಂಗ್ಳೂರಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ  | Kannada Prabha

ಸಾರಾಂಶ

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಹಿಂದುಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿ ವಿಶ್ವಹಿಂದು ಪರಿಷತ್, ಬಜರಂಗದಳ ಮಂಗಳೂರು ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಯಿತು.

ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

೨೦೪೭ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚಿನ ಭಾಗವಾಗಿ ವಕ್ಫ್‌ ಕಾಯ್ದೆ ವಿರೋಧದ ಹೆಸರಿನಲ್ಲಿ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖ್ ಸೂರಜ್‌ ಕುಮಾರ್ ಹೇಳಿದರು.

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಹಿಂದುಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿ ವಿಶ್ವಹಿಂದು ಪರಿಷತ್, ಬಜರಂಗದಳ ಮಂಗಳೂರು ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಖಿಲಾಪತ್ ಚಳವಳಿ, ಕಾಶ್ಮೀರದಿಂದ ಪಂಡಿತರನ್ನು ಓಡಿಸಿದ ಸಂದರ್ಭ ಹಿಂದುಗಳ ಮೇಲೆ ನಡೆಸಿದ ದೌರ್ಜನ್ಯದ ಮಾದರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧದ ನೆಪದಲ್ಲಿ ಪ್ರತಿಭಟನೆ ನಡೆಸಿ ಹಿಂದುಗಳನ್ನು ದಮನಿಸಲಾಗುತ್ತಿದೆ ಎಂದರು.

ವಕ್ಫ್‌ ಆಸ್ತಿಯಿಂದ ಬಡ ಮುಸಲ್ಮಾನರಿಗೆ, ಮಹಿಳೆಯರಿಗೆ ಉಪಯೋಗ ಆಗುತ್ತಿಲ್ಲ. ವಕ್ಫ್‌ ಮಂಡಳಿಯಿಂದ ಸರ್ಕಾರಕ್ಕೆ ಯಾವುದೇ ತೆರಿಗೆ ಸಲ್ಲಿಕೆ ಆಗುತ್ತಿಲ್ಲ. ಕೇರಳದಲ್ಲಿ ಕ್ರೈಸ್ತರ ಆಸ್ತಿಯನ್ನು ವಕ್ಫ್‌ ಭೂಮಿ ಎನ್ನಲಾಗುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ವಕ್ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯವಾಗಿದೆ ಎಂದರು.ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ಅಡ್ಯಾರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಸಂದರ್ಭ ಮುಸಲ್ಮಾನರು ಹಿಂದೂಗಳನ್ನು ಹೆದರಿಸಿಲ್ಲ. ಆದರೆ ೫೦ ಸಾವಿರ ಜನ ಸೇರುತ್ತಾರೆ ಎಂದು ಹೆದ್ದಾರಿ ಬದಿಯಲ್ಲಿದ್ದ ಕೇಸರಿ ಬಂಟಿಂಗ್ಸ್ ತೆಗೆಸಿ ಪೊಲೀಸರೇ ಹಿಂದೂಗಳನ್ನು ಹೆದರಿಸಿದರು. ರಸ್ತೆ ಬಂದ್ ಮಾಡುತ್ತೇವೆ, ವಾಹನ ಸಂಚಾರ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದರು. ಇಂತಹ ಸವಾಲುಗಳನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಹಿಂದೂಗಳು ಏಳುವುದು ತಡವಾಗಿ, ಎದ್ದ ಬಳಿಕ ನೀಡುವ ಪೆಟ್ಟು ಜನ್ಮಜನ್ಮಾಂತರಕ್ಕೆ ನೆನಪಿಟ್ಟುಕೊಳ್ಳಬೇಕು ಎಂದು ಸೂರಜ್‌ಕುಮಾರ್ ಹೇಳಿದರು.

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಪ್ರಮುಖರಾದ ಶಿವಾನಂದ ಮೆಂಡನ್, ಕೃಷ್ಣಮೂರ್ತಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಕಟೀಲು ದಿನೇಶ ಪೈ, ಸಂಕಪ್ಪ ಭಂಡಾರಿ, ಪ್ರದೀಪ್ ಸರಿಪಳ್ಳ, ಬಜರಂಗದಳ ಮುಖಂಡರಾದ ಭುಜಂಗ ಕುಲಾಲ್, ಪುನೀತ್ ಅತ್ತಾವರ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ