ಕನ್ನಡಪ್ರಭ ವಾರ್ತೆ ಸುರಪುರ
ಕೆಂಭಾವಿ-ಹುಣಸಗಿ ಮುಖ್ಯ ರಸ್ತೆಯ ಮುದನೂರ ಕ್ರಾಸ್ ಬಳಿ ಇರುವ ದೇವರ ದಾಸಿಮಯ್ಯನವರ ವೃತ್ತಕ್ಕೆ ಕಿಡಿಗೇಡಿಗಳು ನೀಲಿ ಧ್ವಜ ಕಟ್ಟಿದ್ದನ್ನು ಕಂಡ ಮುದನೂರ ಬಿ ಹಾಗೂ ಮುದನೂರ ಕೆ. ಗ್ರಾಮದ ದಾಸೀಮಯ್ಯ ಭಕ್ತರು ಮುಂಜಾನೆಯಿಂದ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿ, 11ನೇ ಶತಮಾನದ ಮಹಾನ್ ಶರಣ ದಾಸಿಮಯ್ಯನವರ ಪುಣ್ಯ ಕ್ಷೇತ್ರವಾಗಿದೆ. ಈ ಗ್ರಾಮದಲ್ಲಿ ಇಲ್ಲಿಯವರೆಗೂ ಎಲ್ಲರೂ ಒಗಟ್ಟಾಗಿ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಂದು ಗ್ರಾಮದ ಪ್ರತಿಯೊಂದು ವೃತ್ತಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ. ಆದರೆ, ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಾಸಿಮಯ್ಯನವರ ಭಾವಚಿತ್ರದ ಮೇಲೆ ಕಾಲಿಟ್ಟು ನೀಲಿ ಧ್ವಜ ಕಟ್ಟಿದ್ದು ತೀವ್ರ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.ಘಟನೆ ಸುದ್ದಿ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸಿಪಿಐ ಸಚಿನ್ ಚಲುವಾದಿ ಹಾಗೂ ಪಿಎಸ್‌ಐ ರಾಜಶೇಖರ ರಾಠೋಡ ಅವರು ಪ್ರತಿಭಟನಾ ನಿರತರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ನೀಲಿ ಧ್ವಜ ಕಟ್ಟಿದ ಕಿಡಗೇಡಿಗಳನ್ನು ಶೀಘ್ರವೆ ಬಂಧಿಸಲಾಗುವುದು ಎಂದು ಮನವೊಲಿಸಿದರೂ ಸಂಧಾನ ಫಲಿಸದೆ ಧ್ವಜ ಕಟ್ಟಿದ ಕಿಡಿಗೇಡಿಯೆ ಬಂದು ಧ್ವಜ ಇಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬುದಾಗಿ ಪಟ್ಟುಹಿಡಿದರು.
ಸುಬ್ಬಣ್ಣ ಚೌಧರಿ, ಶಾಂತರೆಡ್ಡಿ ಚೌಧರಿ, ಕೃಷ್ಣಾರೆಡ್ಡಿ, ಮಲ್ಲರೆಡ್ಡಿ ಯಡಳ್ಳಿ, ಹಣಮಂತರೆಡಡಿ ಚೌಧರಿ, ಯಂಕಾರೆಡ್ಡಿ ಕರಡಕಲ್, ದಲಿತ ಮುಖಂಡರಾದ ಮಡಿವಾಳಪ್ಪ ಕಿರದಳ್ಳಿ, ಲಾಲಪ್ಪ ಆಲ್ಹಾಳ, ಶಿವಶರಣ ನಾಗರೆಡ್ಡಿ ಸೇರಿದಂತೆ ಇತರರಿದ್ದರು.