ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವೈಫಲ್ಯ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ ಅಂತ್ಯದ ಒಳಗಾಗಿ ಬಿಜೆಪಿ ರೈತ ಮೊರ್ಚಾದಿಂದ ಎಲ್ಲಾ ತಾಲೂಕು ಕೇಂದ್ರ, ಡಿಸೆಂಬರ್ ಮೊದಲ ವಾರದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಳಗಾವಿ ಅಧಿವೇಶನ ವೇಳೆ ಬೃಹತ್ ಪ್ರತಿಭಟನೆ ನಡೆಸಲು ಪೂರ್ವಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ರೈತರಿಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಪ್ರತಿ ಲೀಟರ್ ಹಾಲಿಗೆ 7 ರು. ಏರಿಕೆ ಮಾಡುತ್ತೇವೆ ಎಂದು ಹೇಳಿದ್ದರೂ ಕೂಡ ಇಲ್ಲಿಯವರೆವಿಗೂ ಹೆಚ್ಚಿಸಿಲ್ಲ. ಜೊತೆಗೆ ಬಿಜೆಪಿ ಸರ್ಕಾರ ಘೋಷಣೆ ಮಾಡಿದ 5 ರು. ಪ್ರೋತ್ಸಾಹ ಧನದ ಹಣವೇ ಬಾಕಿ ಉಳಿದಿದೆ ಎಂದು ಛೇಡಿಸಿದರು.ರೈತರ ಬೆಳೆಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಸರ್ಕಾರ ಸಕಾಲಕ್ಕೆ ಭತ್ತ ರಾಗಿ ಖರೀದಿ ಕೇಂದ್ರ ಆರಂಭಿಸದೇ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡದ ಹಿನ್ನೆಲೆಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆಂದು ಹೇಳುತ್ತಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ. ಯುವ ನಿಧಿ ಯುವಕರ ಕೈಗೆ ಸಿಗುತ್ತಿಲ್ಲ. ಭರವಸೆ ನೀಡುತ್ತಾ ರಾಜ್ಯದ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕುರ್ಚಿಗಾಗಿ ಕಿತ್ತಾಟದಲ್ಲಿ ಮುಳುಗಿದ ಪರಿಣಾಮ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಮಂಡ್ಯ ಜಿಲ್ಲೆಯವರೇ ಕೃಷಿ ಸಚಿವರಾಗಿದ್ದರೂ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗದೇ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ರೈತಮೋರ್ಚಾ ತಾಲೂಕು ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಮುಖಂಡರಾದ ರಾಜೇಶ್, ಷಣ್ಮುಖೇಗೌಡ, ರಮೇಶ್, ಜವರೇಗೌಡ, ಶಿವಲಿಂಗಸ್ವಾಮಿ, ಉಮೇಶ್ ಸೇರಿದಂತೆ ಇತರರು ಇದ್ದರು.