ಯಲ್ಲಾಪುರ: ಇತ್ತೀಚೆಗೆ ಶಿವಮೊಗ್ಗ, ಬೀದರ್, ಧಾರವಾಡಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿ, ಕತ್ತರಿಸಿ, ಜಾತಿ ನಿಂದನೆ ಮಾಡಿದ ಹೇಯ ಕೃತ್ಯದ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ತಾಲೂಕು ಹವ್ಯಕ ಸಂಘದ ಆಶ್ರಯದಲ್ಲಿ ಬುಧವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ತಹಶೀಲ್ದಾರ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, ನಾವು ಪರಶುರಾಮನ ವಂಶದವರು. ಇಂದು ಸಾಂಕೇತಿಕವಾಗಿ ಈ ಜನಿವಾರ ಹರಿದವರಿಗೆ ಮತ್ತು ಸರ್ಕಾರಕ್ಕೆ ಸಂದೇಶ ನೀಡುತ್ತಿದ್ದೇವೆ. ಹೀಗೆ ಬ್ರಾಹ್ಮಣರನ್ನು ಇನ್ನು ಹೆಚ್ಚು ಅವಮಾನಿಸಿದರೆ ಪರಶುರಾಮನ ಹಾಗೆ ದುಷ್ಟರ ಸಂಹಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತೀಯ ಸಂಸ್ಕೃತಿ, ನಂಬಿಕೆ ಎಲ್ಲದಕ್ಕೂ ತಳಪಾಯವಿದೆ. ಅದನ್ನು ಅರ್ಥೈಸಿಕೊಳ್ಳಬೇಕು. ಶಾಸ್ತ್ರ ಹೇಳುವವರು ಶಸ್ತç ಹಿಡಿಯಲು ಹಿಂಜರಿಯಲಾರರು. ಜಾತಿ, ನೀತಿ, ಸಂಸ್ಕೃತಿ ಎಲ್ಲ ರಕ್ಷಣೆಯಾಗಬೇಕು ಎಂದರು.ಡಾ.ರವಿ ಭಟ್ಟ ಬರಗದ್ದೆ ಮಾತನಾಡಿ, ರಾಷ್ಟ್ರದೆಲ್ಲೆಡೆ ಬ್ರಾಹ್ಮಣರ ಮೇಲೆ ನಿರಂತರ ಅವಮಾನ ಮಾಡಲಾಗುತ್ತಿದೆ. ಹಲ್ಲೆ ಮಾಡಲಾಗುತ್ತಿದೆ. ಇದಕ್ಕೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಕಶ್ಯಪ ಎಂಬ ಸಿನೆಮಾ ನಿರ್ದೇಶಕ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುವೆ ಎಂದಿದ್ದಾನೆ. ಆತನ ಮೇಲೆ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಸೋಂದಾ ಸ್ವರ್ಣವಲ್ಲಿಯ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀ ಸಂದೇಶ ನೀಡಿ, ಎಲ್ಲ ಜಾತಿಯವರಲ್ಲೂ ಹೇಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ ಹೀಗೆ ಎಲ್ಲ ಜಾತಿಗಳಲ್ಲೂ ಅವರದ್ದೇ ಒಂದು ಧರ್ಮವಿದೆ. ಆದರ ಆಚರಣೆಗೆ ಎಂದೂ ಚ್ಯುತಿಯಾಗಬಾರದು ಎಂದರು.ಪ್ರಮುಖರಾದ ಜಿ.ಎನ್.ಹೆಗಡೆ ಹಿರೇಸರ, ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ, ನಾಗೇಶ ಹೆಗಡೆ ಪಣತಗೇರಿ, ಉಮೇಶ ಭಾಗ್ವತ, ಕೆ.ಎಸ್.ಭಟ್ಟ, ಸುಬ್ರಹ್ಮಣ್ಯ ಹೆಗಡೆ, ವಿನಾಯಕ ಪೈ, ವಿಜಯ ಆಚಾರಿ ಸೇರಿದಂತೆ ಮಾತೆಯರು ಮತ್ತು ಪುರುಷರು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಹವ್ಯಕ ಸಂಘದ ಕಾರ್ಯದರ್ಶಿ ಮುರಳಿ ಹೆಗಡೆ ವಂದಿಸಿದರು. ಈ ಸಂದರ್ಭದಲ್ಲಿ ಜಮ್ಮುವಿನಲ್ಲಿ ನಡೆದ ಘೋರ ಭಯೋತ್ಪಾದಕ ಕೃತ್ಯ ಖಂಡಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು.