ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಸಭೆ

KannadaprabhaNewsNetwork |  
Published : Dec 05, 2025, 02:00 AM IST
ಶಾಸಕ ವಿಜಯೇಂದ್ರ ಮೆರವಣಿಗೆಯಲ್ಲಿ ಎತ್ತಿನಗಾಡಿಯಲ್ಲಿ ಸಂಚರಿಸಿದರು | Kannada Prabha

ಸಾರಾಂಶ

ಹೊಟ್ಟೆಪಾಡಿಗಾಗಿ ಕೆಲ ಕಾಂಗ್ರೆಸ್ ಪುಡಾರಿ ರಾಜಕಾರಣಿಗಳು ಸರ್ಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗುತ್ತಿದ್ದು, ಪ್ರಥಮ ಬಾರಿಗೆ ಶಾಸಕನಾಗಿರುವ ಹಿನ್ನಲೆಯಲ್ಲಿ ಎಲ್ಲರಿಗೂ ಗೌರವ ನೀಡುತ್ತಿದ್ದೇನೆ ಅದನ್ನು ದೌರ್ಬಲ್ಯ ಎಂದು ಭಾವಿಸದೆ ವರ್ತನೆ ತಿದ್ದಿಕೊಳ್ಳಿ ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಹೊಟ್ಟೆಪಾಡಿಗಾಗಿ ಕೆಲ ಕಾಂಗ್ರೆಸ್ ಪುಡಾರಿ ರಾಜಕಾರಣಿಗಳು ಸರ್ಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗುತ್ತಿದ್ದು, ಪ್ರಥಮ ಬಾರಿಗೆ ಶಾಸಕನಾಗಿರುವ ಹಿನ್ನಲೆಯಲ್ಲಿ ಎಲ್ಲರಿಗೂ ಗೌರವ ನೀಡುತ್ತಿದ್ದೇನೆ ಅದನ್ನು ದೌರ್ಬಲ್ಯ ಎಂದು ಭಾವಿಸದೆ ವರ್ತನೆ ತಿದ್ದಿಕೊಳ್ಳಿ ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದರು.

ಗುರುವಾರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಭತ್ತ ಮೆಕ್ಕೆಜೋಳಕ್ಕೆ ಬೆಂಬಲ ನೀಡುವಂತೆ ಹಾಗೂ ಖರೀದಿ ಕೇಂದ್ರ ಶೀಘ್ರ ತೆರೆಯುವಂತೆ, ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು, ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ತಾ. ಬಿಜೆಪಿ ರೈತ ಮೋರ್ಚಾ ಹಾಗೂ ಮಂಡಲ ಬಿಜೆಪಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರೈತ ಹೋರಾಟದ ಮೂಲಕ ತಾಲೂಕಿನಿಂದ ಹಬ್ಬಿದ ಕಿಚ್ಚು ರಾಜ್ಯಾದ್ಯಂತ ಹರಡಲಿದ್ದು, ಈ ಹಿಂದೆ ಯಡಿಯೂರಪ್ಪನವರ ರೈತ ಪರ ಹೋರಾಟದಿಂದ ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕುವಲ್ಲಿ ಯಶಸ್ವಿಯಾಗಿದೆ. ಇದೀಗ ಪುನಃ ಹೋರಾಟವನ್ನು ತಾಲೂಕಿನ ಮೂಲಕ ಆರಂಭಿಸಲಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ರೈತರ ಪರವಾಗಿ ದ್ವನಿ ಮೊಳಗಲು ಇದೀಗ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನಾಂದಿ ಹಾಡಲಾಗಿದೆ ಎಂದ ಅವರು ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು ಸ್ಪಂದಿಸಬೇಕಾದ ಮುಖ್ಯಮಂತ್ರಿ, ಸಚಿವರು ಕುರ್ಚಿಗಾಗಿ ಹಗ್ಗ ಜಗ್ಗಾಟದಲ್ಲಿ ತೊಡಗಿದ್ದಾರೆ. ರಾಯಚೂರು, ಗುಲ್ಬರ್ಗ, ಬೆಳಗಾವಿ ಮತ್ತಿತರ ಕಡೆ ಪ್ರವಾಸದ ಸಂದರ್ಭದಲ್ಲಿ ರೈತರ ಸಂಕಷ್ಟ ಅರಿತಿದ್ದು ಉಸ್ತುವಾರಿ ಸಚಿವರು, ಕಂದಾಯ, ಕೃಷಿ ಸಹಿತ ಎಲ್ಲ ಸಚಿವರು ಬೆಂಗಳೂರಿನಲ್ಲಿದ್ದಾರೆ. ಕಲ್ಬುರ್ಗಿಗೆ ತೆರಳಿದಾಗ ಅತುರದಿಂದ ಪ್ರಿಯಾಂಕ್‌ ಖರ್ಗೆ ಹೆಲಿಕ್ಯಾಪ್ಟರ್ ನಲ್ಲಿ ಧಾವಿಸಿ ಕಾಟಾಚಾರಕ್ಕೆ ಸಮೀಕ್ಷೆ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಆರಂಭದಲ್ಲಿ ನೆರೆಹಾವಳಿಯಿಂದ ತತ್ತರಿಸಿದ ಜಿಲ್ಲೆಗಳಿಗೆ ಏಕಾಂಗಿಯಾಗಿ ವೈಮಾನಿಕ ಸಮೀಕ್ಷೆ ಮೂಲಕ ಮನೆಹಾನಿಗೆ ಎನ್ ಡಿ ಆರ್ ಎಫ್ ನಿಭಂದನೆಯನ್ವಯ ರು.1 ಲಕ್ಷ ಪರಿಹಾರವನ್ನು ರು.5 ಲಕ್ಷಕ್ಕೆ ಹೆಚ್ಚಿಸಿ ತುರ್ತಾಗಿ ಬಿಡುಗಡೆಗೊಳಿಸಿದ್ದು, ಇದೀಗ ಸರ್ಕಾರ ಬಿಕ್ಷೆ ರೀತಿಯಲ್ಲಿ ರು. 70-80 ಸಾವಿರ ನೀಡುತ್ತಿದೆ ಎಂದ ಅವರು, ಕಿಸಾನ್ ಸಮ್ಮಾನ್, ವಿದ್ಯಾನಿಧಿ, ಹಾಲಿಗೆ ಪ್ರೋತ್ಸಾಹ ಧನ ತಡೆಹಿಡಿದಿದ್ದು 140 ಶಾಸಕರು ಗೆದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ರೈತರು ಬಡವರು ಮತ ನೀಡಲಿಲ್ಲವೇ ಎಂದು ಪ್ರಶ್ನಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸುತ್ತಮುತ್ತ ಜಿಲ್ಲೆಯ 30-40 ಸಾವಿರ ರೈತರ ಜತೆಗೆ ಮುತ್ತಿಗೆ ಹಾಕಲು ನಿರ್ದರಿಸಲಾಗಿದೆ ಎಂದರು.

ತಾಲೂಕಿನ ಜನತೆ ಆಶೀರ್ವಾದದಿಂದ ಶಾಸಕನಾಗಿದ್ದು, ಅಭಿವೃದ್ಧಿ ಕಾರ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅನುದಾನಕ್ಕೆ ಬಿಕ್ಷೆ ಬೇಡುವುದಿಲ್ಲ ಶಾಸಕನಾದ ಪರಿಣಾಮ ಮೋದಿ, ಅಮಿತ್ ಶಾ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಉಳಿದ ಅವಧಿಯಲ್ಲಿ ರೈತರ, ಬಡವರ, ಪ.ಜಾತಿ ಪಂಗಡದ ಪರವಾಗಿ ದ್ವನಿ ಎತ್ತಿ ರಾಜ್ಯದಲ್ಲಿ ಪುನಃ ಪಕ್ಷ ಅಧಿಕಾರ ಗಳಿಸಲಿದ್ದು ಈ ಬಗ್ಗೆ ಅನುಮಾನ ಬೇಡ ಎಂದರು.

ಜಿಲ್ಲೆ ಉಸ್ತುವಾರಿ ಸಚಿವರು ಪುಕ್ಕಟೆ ಮಾತನಾಡುತ್ತಿದ್ದು, ಪಕ್ಕದ ಸೊರಬದಲ್ಲಿ ಬಸ್ ನಿಲ್ದಾಣ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ನಿರ್ಮಾಣವಾಗಿದ್ದು, ಆಸ್ಪತ್ರೆಗಾಗಿ ಶಿಕಾರಿಪುರಕ್ಕೆ ಬರುತ್ತಿದ್ದಾರೆ ಎಂದು ಹರಿಹಾಯ್ದ ಅವರು ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗಜಗ್ಗಾಟ ವಿಪರೀತವಾಗಿದ್ದು ಸರ್ಕಾರ ಯಾವಾಗ ಬೀಳುತ್ತೆ ಗೊತ್ತಿಲ್ಲ, ಇಲ್ಲಿ ಕೆಲ ಪುಡಾರಿಗಳು ಹೊಟ್ಟೆಪಾಡಿಗಾಗಿ ಪೊಲೀಸ್ ಠಾಣೆ, ಆಸ್ಪತ್ರೆ, ತಾಲೂಕು ಕಚೇರಿಗೆ ಅಲೆದಾಡುತ್ತಿದ್ದು ಅಧಿಕಾರಿಗಳಿಗೆ ಕಿರುಕುಳ ದೌರ್ಜನ್ಯ ಹೆಚ್ಚು ದಿನ ನಡೆಯೋಲ್ಲ, ಪ್ರಥಮ ಬಾರಿಗೆ ಶಾಸಕನಾದ ಕಾರಣ ನೀಡುತ್ತಿರುವ ಗೌರವವನ್ನು ದೌರ್ಬಲ್ಯ ಎಂದು ಬಾವಿಸಬೇಡಿ ಎಂದು ಎಚ್ಚರಿಸಿದರು.

ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ವಿಜಯೇಂದ್ರ ಎತ್ತಿನ ಗಾಡಿಯಲ್ಲಿ ಸಂಚರಿಸಿ ಗಮನ ಸೆಳೆದರು. ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾ.ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಯೋಗೇಶಪ್ಪ, ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾ.ಅಧ್ಯಕ್ಷ ಹನುಮಂತಪ್ಪ, ರೇವಣಪ್ಪ, ಗುರುಮೂರ್ತಿ, ಮಹೇಶ್ ಹುಲ್ಮಾರ್, ಗಾಯತ್ರಿದೇವಿ, ನಿವೇದಿತಾರಾಜು, ರೂಪ, ರೇಖಾ, ಸುನಂದಾ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಡಘಟ್ಟ ಗ್ರಾ.ಪಂ.ಗೆ ಗಾಂಧೀಗ್ರಾಮ ಪುರಸ್ಕಾರ: ರುದ್ರಮ್ಮ ಬಸವರಾಜು
ಕಳವಾಗಿದ್ದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ