ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ನೀಡಿ

KannadaprabhaNewsNetwork |  
Published : Nov 25, 2025, 01:15 AM IST
8 | Kannada Prabha

ಸಾರಾಂಶ

ಪ್ರತಿ ಬಾರಿ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಿದ ನಂತರ ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.ಮುಸುಕಿನ ಜೋಳಕ್ಕೆ ಕ್ವಿಂಟಾಲ್‌ ಗೆ 2400 ರೂ. ನಿಗದಿಯಾಗಿದ್ದು, ಸದ್ಯ ರಾಜ್ಯದಲ್ಲಿ 1900 ರಿಂದ 1400 ರೂ.ಗೆ ಇಳಿಕೆಯಾಗಿದೆ. ಒಂದೆಡೆ ಕಡಿಮೆ ಗುಣಮಟ್ಟದ ಬಿತ್ತನೆ ಬೀಜ, ಮತ್ತೊಂದೆಡೆ ಹವಾಮಾನ ವೈಪರೀತ್ಯದಿಂದ ಈಗಾಗಲೇ ರೈತರು ಸಂಕಷ್ಟದಲ್ಲಿರುವಾಗ ಬೆಲೆ ಕುಸಿತ ಮತ್ತೊಂದು ದೊಡ್ಡ ಅಘಾತವಾಗಿ ಪರಿಣಮಿಸಿದೆ. ಹೀಗಾಗಿ, ಸರ್ಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಠ ಬೆಲೆಯಾದ ಕ್ವಿಂಟಾಲ್‌ ಗೆ 2400 ರೂ. ಜೊತೆಗೆ ರಾಜ್ಯ ಸರ್ಕಾರದಿಂದ 600 ರೂ. ಸೇರಿಸಿ 3 ಸಾವಿರ ರೂ. ಕೊಡಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿ ಬಾರಿ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಿದ ನಂತರ ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆಯುತ್ತಿದೆ. ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ದಲ್ಲಾಳಿಗಳಿಗೆ ಪೂರಕವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಅಪವಾದ ತಪ್ಪಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಆಗ್ರಹಿಸಿದರು.ಗ್ರಾಮೀಣ ಭಾಗದ ಅರ್ಥ ವ್ಯವಸ್ಥೆಯ ಮೂಲ ಆಧಾರ ಹೈನುಗಾರಿಕೆ. ಹಾಲು ಉತ್ಪಾದಕ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಬೋನಸ್, ಆರ್ಥಿಕ ಸೌಲಭ್ಯ ಸಿಗುವಂತೆ ಮಾಡಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಾನೂನಿನ ವಿರುದ್ಧವಾಗಿ ದಲ್ಲಾಳಿಗಳು ಕಮಿಷನ್ ಪಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾನವ- ಪ್ರಾಣಿ ಸಂಘರ್ಷ ದಿನನಿತ್ಯದ ಸವಾಲಾಗಿದ್ದು, ಕಾಡುಪ್ರಾಣಿಗಳಿಂದ ಆಗುತ್ತಿರುವ ಬೆಳೆ ಹಾನಿಗೆ ಮಾರುಕಟ್ಟೆಯ ದರದಲ್ಲಿ ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ಕಟ್ಟಿಕೊಡಬೇಕು ಎಂದು ಅವರು ಆಗ್ರಹಿಸಿದರು.ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ರೈತರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ರಾಜ್ಯ ವ್ಯಾಪಿ ಒಂದೇ ನಿಯಮದಂತೆ ಕಬ್ಬಿನ ದರ ನೀಡಬೇಕು. ಎಥನಾಲ್ ಉತ್ಪಾದನೆಗೆಂದು ಅಮೆರಿಕಾದಿಂದ ಸುಂಕ ರಹಿತವಾಗಿ ಮಕ್ಕೆಜೋಳವನ್ನು ಆಮದು ಮಾಡಿಕೊಳ್ಳುವ ಒಡಂಬಡಿಕೆಗೆ ತಡೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್, ಪದಾಧಿಕಾರಿಗಳು ಹಾಗೂ ರೈತರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌