ಕನ್ನಡಪ್ರಭ ವಾರ್ತೆ ಉಡುಪಿ
ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಸೆಸ್ ಕಾಯಿದೆ 1996 ಮತ್ತು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1976ಗಳನ್ನು ಉಳಿಸುವಂತೆ, ಕಟ್ಟಡ ಕಾರ್ಮಿಕ ಕೇಂದ್ರ ಸಲಹಾ ಸಮಿತಿ ಮತ್ತೆ ಆರಂಭಿಸುವಂತೆ, ಕಾರ್ಮಿಕ ಕಲ್ಯಾಣ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಸದಂತೆ, ಕಾರ್ಮಿಕ ಕಲ್ಯಾಣ ಮಂಡಳಿಗಳಲ್ಲಿ ಕಾರ್ಮಿಕ ಸಂಘಟನೆಗಳಿಗೆ ಪ್ರಾತನಿಧ್ಯ ನೀಡುವುದು ಮತ್ತಿತರ ಬೇಡಿಕೆ ಮುಂದಿರಿಸಿ ಪ್ರತಿಭಟನೆ ನಡೆಯಿತು.
ರಾಜ್ಯಾದ್ಯಂತ ಅಖಿಲ ಭಾರತ ಮಟ್ಟದ 11 ಮತ್ತು ರಾಜ್ಯ ಮಟ್ಟದ 11 ಬೇಡಿಕೆ ಮುಂದಿಟ್ಡು ಹೋರಾಟ ಪ್ರತಿಭಟನೆ ಗೆ ಕರೆ ನೀಡಿದ್ದು ಉಡುಪಿಯಲ್ಲಿ ಕಟ್ಟಡ ಸಂಘದ ನೇತೃತ್ವದಲ್ಲಿ ರಾಜ್ಯ ದ ಬೇಡಿಕೆಗಳ ಜೊತೆ ಉಡುಪಿ ಜಿಲ್ಲೆಯ ಎರಡು ಬೇಡಿಕೆಗಳೊಂದಿಗೆ ಪ್ರತಿಭಟನೆ ಮಾಡಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು. ಈ ಸಂದರ್ಭ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಪ್ರತಿಭಟನೆಯಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಭೆ ಉದ್ಘಾಟಿಸಿ ಮಾತನಾಡಿದರು, ಜಿಲ್ಲಾ ಕಾರ್ಯದರ್ಶಿ ಶಶಿಧರ ಗೋಲ್ಲ ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ದಯನಂದ ಕೋಟ್ಯಾನ್, ಸರೋಜ, ಗಣೇಶ ನಾಯಕ್, ಸುಭಾಷ್ ನಾಯಕ್, ರಾಮ ಕಾರ್ಕಡ, ವಾಮನ ಪೂಜಾರಿ ಸೈಯದ್, ರಮೇಶ್, ಸಂಜೀವ ನಾಯಕ್ ಚಂದ್ರನಾಯಕ್, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಕರ್ನಾಟಕ ಪ್ರಾಂತ ಕ್ರಷಿ ಕೂಲಿಕಾರ ಸಂಘ ದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಉಡುಪಿ ಬೀಡಿ ಸಂಘದ ಅಧ್ಯಕ್ಷರಾದ ನಳಿನಿ.ಎಸ್. ಉಪಸ್ಥಿತರಿದ್ದರು.