ಕಾರಟಗಿಯಲ್ಲಿ ದೇವದಾಸಿಯರ ಪ್ರತಿಭಟನೆ

KannadaprabhaNewsNetwork | Published : Nov 15, 2024 12:33 AM

ಸಾರಾಂಶ

ದೇವದಾಸಿಯರ ಮಾಸಾಶನ, ಸಹಾಯಧನ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ಕಾರ್ಯಕರ್ತರು ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ದೇವದಾಸಿಯರ ಮಾಸಾಶನ, ಸಹಾಯಧನ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ಕಾರ್ಯಕರ್ತರು ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಜಿ. ಹುಲಿಗೆಮ್ಮ ಮಾತನಾಡಿ, ಹಲವು ವರ್ಷಗಳಿಂದ ದೇವದಾಸಿ ಮಹಿಳೆಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರಗಳು, ಜನಪ್ರತಿನಿಧಿಗಳು ಹುಸಿ ಭರವಸೆಗಳು ನೀಡಿ, ಚುನಾವಣೆ ಬಳಿಕ ನಮ್ಮ ಬೇಡಿಕೆಗಳನ್ನು ಮೂಲೆಗೆ ಹಾಕಿ, ದೇವದಾಸಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಾಸಾಶನ ಹೆಚ್ಚು ಮಾಡಲಾಗುತ್ತಿದೆ ಎನ್ನುವುದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ದೂರಿದರು.

ಹಲವು ತಿಂಗಳಿಂದ ಹೆಚ್ಚುವರಿ ಮಾಸಾಶನ ನೀಡದೆ ಬಾಕಿ ಉಳಿದುಕೊಂಡಿದೆ. ಇನ್ನೂ ಗಣತಿ ಪಟ್ಟಿಯಿಂದ ಹೋಗಿರುವ ದೇವದಾಸಿ ಮಹಿಳೆಯರನ್ನು ಗಣತಿ ಮಾಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಕಂಡಿಲ್ಲ. 2021-22ನೇ ಸಾಲಿನಲ್ಲಿ ಗುರುತಿಸಲಾದ ದೇವದಾಸಿ ಮಹಿಳೆಯರು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದು, ಇವರೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಹಾಗಾಗಿ ದೇವದಾಸಿ ಮಹಿಳೆಯರ ಜೀವನೋಪಾಯಕ್ಕಾಗಿ ಕೃಷಿ ಮಾಡಲು ತಲಾ 5 ಎಕರೆ ನೀರಾವರಿ ಜಮೀನು ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ನಂತರ ಕೃಷಿ ಕೂಲಿಕಾರ ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಬಸವರಾಜ ಮಾತನಾಡಿ, ದೇವದಾಸಿ ಮಹಿಳೆಯರ ಮಕ್ಕಳ ಉನ್ನತ ಶಿಕ್ಷಣ ಹಾಗೂ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ಅಂಕಗಳು, ಪ್ರವೇಶ ಪರೀಕ್ಷೆ, ಸ್ಪರ್ಧೆ ಇಲ್ಲದೇ, ಒಳ ಮೀಸಲಾತಿ ಆಧಾರದಲ್ಲಿ ಮತ್ತು ನೇರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ಮುಂದಿನ ನೇಮಕಾತಿಯಲ್ಲಿ ದೇವದಾಸಿಯರ ಮಕ್ಕಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಗ್ರೇಡ್-2 ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವದಾಸಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡ ಮಂಜುನಾಥ ಡಗ್ಗಿ, ಕಾರ್ಮಿಕ ಮುಖಂಡ ರಮೇಶ ಬೂದಗುಂಪಾ, ಪ್ರತಿಭಟನಾಕಾರರಾದ ರೇಣುಕಮ್ಮ, ಅಯ್ಯಮ್ಮ, ಗಂಗಮ್ಮ, ಕರಿಯಮ್ಮ, ಹುಲಿಗೆಮ್ಮ ಬೆನ್ನೂರು, ಹುಸೇನಮ್ಮ, ವಿರೂಪಮ್ಮ, ದ್ಯಾಮಮ್ಮ ಇತರರಿದ್ದರು.

Share this article