ಬೇಡಿಕೆ ಈಡೇರಿಸುವಂತೆ ಅತಿಥಿ ಶಿಕ್ಷಕರ ಪ್ರತಿಭಟನೆ

KannadaprabhaNewsNetwork | Published : Jan 25, 2024 2:02 AM

ಸಾರಾಂಶ

ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ ವತಿಯಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ ವತಿಯಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ನಂತರ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ದಾನೇಶ ಕಲಕೇರಿ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ, ಕೃಪಾಂಕ ಸೇರಿದಂತೆ ಇನ್ನೂ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಪ್ರಾಮಾಣಿಕತೆಯಿಂದ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುವಲ್ಲಿ ಕಾರ್ಯನಿರತರಾಗಿದ್ದೇವೆ ಎಂದರು.

ಕಳೆದ ಮಾರ್ಚ್, ಜುಲೈನಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಬಂದು ನಮ್ಮ ಅಹವಾಲು ಸ್ವೀಕರಿಸಿ ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಸೂಕ್ತ ಭರವಸೆ ನೀಡಿದ್ದರು. ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು.

ಶಿಕ್ಷಕರ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕು, ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಯಂ ಹುದ್ದೆಗಳು ಬಂದರೆ ನಮ್ಮನ್ನು ಬಿಡುಗಡೆಗೊಳಿಸದೆ ಕರ್ತವ್ಯದಲ್ಲಿ ಮುಂದುವರಿಸಬೇಕು. ಪ್ರತಿ ತಿಂಗಳು ಸರಿಯಾಗಿ ವೇತನ ನೀಡಬೇಕು, ಶೇ.5 ಕೃಪಾಂಕ ನೀಡಬೇಕು, ಕಾಯಂ ಶಿಕ್ಷಕರ ಹಾಜರಾತಿಯಲ್ಲಿ ಅವರು ಶಿಕ್ಷಕರ ಹಾಜರಾತಿ ವಿಲೀನಗೊಳಿಸಬೇಕು, ಇಲಾಖೆ ನೀಡುವ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು, EL, CL ಮಹಿಳೆಯರಿಗೆ ಹೆರಿಗೆಯ ರಜೆಗಳನ್ನು ನೀಡಬೇಕು, ಅತಿಥಿ ಕಾಯಂಮಾತಿಗೊಳಿಸಲು ಸೂಕ್ತ ಕಾನೂನು ರಚಿಸಬೇಕು, ದೆಹಲಿ, ಪಂಜಾಬ್, ಹರಿಯಾಣ ರಾಜ್ಯ ಸರ್ಕಾರದ ಮಾದರಿಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರು ಶರಣಗೌಡ ಬಿರಾದಾರ, ಬಾಗಪ್ಪ ಬಿರನೂರ, ಕಂಠೆಪ್ಪ ಹೊನಮಟ್ಟಿ, ಸಂಗಮೇಶ ದಂಡೋತಿ, ಬಾಗಪ್ಪ ಬಾಗೇವಾಡಿ, ಬಿ.ಎಸ್.ಹೊಸೂರ ಸೇರಿದಂತೆ ಪದಾಧಿಕಾರಿಗಳು ಹಾಗೂ ಅತಿಥಿ ಶಿಕ್ಷಕರು ಭಾಗವಹಿಸಿದ್ದರು.

Share this article