-ಚಿಕ್ಕಮಗಳೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ, ಆಜಾದ್ ಪಾರ್ಕ್‌ನಲ್ಲಿ ಮಾನವ ಸರಪಳಿ ನಿರ್ಮಾಣ
ಲಾರಿ ಚಾಲಕರಿಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕಾನೂನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಲಾರಿ ಮಾಲೀಕರು ಮತ್ತು ಚಾಲಕರು ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ.ಶಿವಾನಂದ್, ಕೇಂದ್ರ ಸರ್ಕಾರ ಲಾರಿ ಜಾರಿಗೆ ಮುಂದಾಗಿರುವ ಕಲಂ 106 ಉಪವಿಧಿ 1 ಮತ್ತು 2 ಹಿಟ್ ಆ್ಯಂಡ್ ರನ್ ಹೊಸ ಕಾಯ್ದೆಯಿಂದ ಚಾಲಕರಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಏಳು ಲಕ್ಷ ರು. ದಂಡ ವಿಧಿಸುವ ಕಾನೂನು ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟ್ರೇಡ್ ಯೂನಿಯನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಶಂಕರ್ ಮಾತನಾಡಿ, ಕೇಂದ್ರದ ಹೊಸ ಕಾನೂನು ಜಾರಿ ಗೊಂಡಲ್ಲಿ ಚಾಲಕರು ಸೇರಿದಂತೆ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿಯಿದೆ. ಪ್ರತಿ ನಿತ್ಯ ಕನಿಷ್ಟ ವೇತನದಲ್ಲಿ ಜೀವನ ನಡೆಸುವವರಿಗೆ ಏಕಾಏಕಿ ಲಕ್ಷಾಂತರ ರು. ದಂಡ ವಿಧಿಸಿದರೆ ಬದುಕಲಾರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಕಾಯ್ದೆ ಹಿಂಪಡೆಯುವಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಟ್ರೇಡ್ ಯೂನಿಯನ್ ಹಾಗೂ ಲಾರಿ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಲಾರಿ ಚಾಲಕರಿಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕಾನೂನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಬುಧವಾರ ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ನಡೆಸಿದರು.