ತಾಲೂಕು ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ
೩೭೧ ಜೆ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಹಾಗೂ ಮೀಸಲಾತಿ ರದ್ದುಪಡಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ಅನ್ಯಾಯವೆಸಗಲು ಮುಂದಾಗಿರುವ ಹಸಿರು ಪ್ರತಿಷ್ಠಾನ ಸಂಘಟನೆಗೆ ದಿಟ್ಟ ಉತ್ತರ ನೀಡುವುದಕ್ಕಾಗಿ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಚಿಂತಕ ಅಲ್ಲಾಗಿರಿರಾಜ ಮಾತನಾಡಿ, ೩೭೧ಜೆ ನಮ್ಮ ಭಾಗದ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗ, ಪ್ರತಿ ಹಾಗೂ ನೌಕರರ ಮುಂಬಡ್ತಿ ಸೇರಿ ಇಲ್ಲಿಯ ಸಮಗ್ರ ಅಭಿವೃದ್ಧಿಯನ್ನು ಸಹಿಸದ ಹಸಿರು ಪ್ರತಿಷ್ಠಾನದಂತಹ ಸಂಘಟನೆಗಳು ಅಡ್ಡಿ ಉಂಟು ಮಾಡುತ್ತಿವೆ. ಈಗ ನಮಗೆ ನೀಡಿದ ಮೀಸಲಾತಿ ರದ್ದುಗೊಳಿಸಬೇಕೆನ್ನುವ ಕೂಗು ಅಸಂವಿಧಾನಿಕವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲರೂ ಈ ಹುನ್ನಾರವನ್ನು ನಾವೆಲ್ಲರೂ ಸೇರಿ ಖಂಡಿಸಿ, ಪ್ರತಿಭಟಿಸಬೇಕಾಗಿದೆ. ಈಗಾಗಲೇ ಬೀದರ, ಕಲಬುರ್ಗಿ, ರಾಯಚೂರು, ಗಂಗಾವತಿ, ಕಾರಟಗಿಯಲ್ಲಿ ಪ್ರತಿಭಟನೆಗಳಾಗಿವೆ. ಅದರಂತೆ ಕನಕಗಿರಿಯಲ್ಲಿಯೂ ಪ್ರತಿಭಟಿಸುವ ಮೂಲಕ ಉತ್ತರ ನೀಡಲು ನಾವೆಲ್ಲರೂ ಬದ್ಧರಾಗೋಣ ಎಂದರು.ಪ್ರಮುಖರಾದ ರಮೇಶ ನಾಯಕ, ಮಹಾಂತೇಶ ಸಜ್ಜನ, ಶರಣಪ್ಪ ಭತ್ತದ, ವಾಗೇಶ ಹಿರೇಮಠ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಮನವಿ ಮಾಡಿದರು. ಎಲ್ಲರ ಸಲಹೆಯಂತೆ ಜು.೨೯ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ. ರಾಜಶೇಖರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಶಾಲೆಯ ಫಲಿತಾಂಶ ಕುಂಠಿತವಾಗಿದ್ದರಿಂದ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಇಒ ಅವರು, ಈ ಭಾರಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು. ಅಧ್ಯಯನ ಯಾವ ರೀತಿ ಮಾಡಬೇಕೆನ್ನುವ ಕುರಿತು ವಿಷಯವಾರು ಶಿಕ್ಷಕರ ಜತೆ ಚರ್ಚಿಸಬೇಕು. ಕಲಿಕೆಗೆ ಏನಾದರೂ ಸಮಸ್ಯೆಗಳಿದ್ದರೆ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸುವಂತೆ ತಿಳಿಸಿದರು.ಇದಕ್ಕೂ ಮೊದಲು ಸುಳೇಕಲ್ ಗ್ರಾಪಂ ಕಚೇರಿಗೆ ತೆರಳಿದ ಇಒ ಪ್ರಗತಿ ಪರಿಶೀಲನೆ ನಡೆಸಿದರು.
ಶಾಲಾ ಶಿಕ್ಷಕ ಮಹದೇವಪ್ಪಸ್ವಾಮಿ, ತಾಂತ್ರಿಕ ಸಂಯೋಜಕರಾದ ಸಯ್ಯದ್ ತನ್ವೀರ್, ಗ್ರಾಪಂ ಕಾರ್ಯದರ್ಶಿ ನಾಗಪ್ಪ, ಸದಸ್ಯ ಬೆಟ್ಟಪ್ಪ, ಗಣಕಯಂತ್ರ ಸಹಾಯಕ ದುರುಗೇಶ್ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.