ಸ್ವಾತಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ 23ರಂದು ಪ್ರತಿಭಟನೆ

KannadaprabhaNewsNetwork | Published : Apr 19, 2025 12:41 AM

ಸಾರಾಂಶ

ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಮಾಸೂರಿನ ಯುವತಿ ಸ್ವಾತಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದು, ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವುದು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಹಾಗೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಏ. 23ರಂದು ಹಾವೇರಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ ಹೇಳಿದರು.

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಮಾಸೂರಿನ ಯುವತಿ ಸ್ವಾತಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದು, ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವುದು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಹಾಗೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಏ. 23ರಂದು ಹಾವೇರಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹಿಂದುಳಿದ ವರ್ಗದವರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಲವ್‌ ಜಿಹಾದ್ ಹೆಸರಿನಲ್ಲಿ ನಯಾಜ್ ಎಂಬಾತ ಮಾಸೂರಿನಲ್ಲಿ ಸಹೋದರಿ ಸ್ವಾತಿ ಹತ್ಯೆಗೈದು ಕಗ್ಗೊಲೆ ಮಾಡಿದ್ದಾನೆ. ಯುವತಿ ಮನೆಯವರು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟರೂ, ಮೃತದೇಹ ಸಿಕ್ಕ ಬಳಿಕ ತರಾತುರಿಯಲ್ಲಿ ಪೊಲೀಸರು ದಫನ್ ಮಾಡಿರುವುದು ಅನುಮಾನಕ್ಕೀಡು ಮಾಡುತ್ತಿದೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.

ಸ್ವಾತಿ ಸಾವಿನ ಅನ್ಯಾಯ ಖಂಡಿಸಿ ಏ. 23ರಂದು ಬೆಳಗ್ಗೆ 11ಕ್ಕೆ ನ್ಯಾಯ ಜಾಥಾ ಹಮ್ಮಿಕೊಂಡಿದ್ದೇವೆ. ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಜಾಥಾ ನಡೆಯಲಿದ್ದು, ಹೊಸಮನಿ ಸಿದ್ದಪ್ಪ ವೃತ್ತವನ್ನು ತಲುಪಿ ಪ್ರತಿಭಟನೆ ನಡೆಸಲಾಗುವುದು. ವಿವಿಧ ಮಠಾಧೀಶರು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಯಲ್ಲಿ ಹತ್ಯೆಗೊಳಗಾದ ಯುವತಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಮುಖ ರೂವಾರಿಗೆ ಗಲ್ಲುಶಿಕ್ಷೆಯಾಗಬೇಕು. ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇದರ ಜತೆಗೆ ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4ಮೀಸಲು ಘೋಷಿಸಿ ಓಲೈಕೆ ರಾಜಕಾರಣವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಹಿಂದೂ ಸಮಾಜ ಹಾಗೂ ಕ್ರಾಂತಿವೀರ ಬ್ರಿಗೇಡ್ ಖಂಡಿಸುತ್ತದೆ, ಕೂಡಲೇ ಮೀಸಲು ಹಿಂಪಡೆಯುವಂತೆ ಆಗ್ರಹಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಭೇದ ಮರೆತು ಹಿಂದೂಗಳು ಭಾಗವಹಿಸಬೇಕು ಎಂದರು.

ಬಿಜೆಪಿಯಲ್ಲಿ ನಿಷ್ಠಾವಂತರನ್ನು ಸೈಡ್‌ಲೈನ್ ಮಾಡುವುದು ಹೊಸದೇನಲ್ಲ. ಸೈಡ್‌ಲೈನ್ ಮಾಡಲೆಂದೇ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುತ್ತಿದೆ. ಆದಷ್ಟು ಶೀಘ್ರದಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಗೆ ವಾಪಸ್ ಆಗುತ್ತಾರೆ ಎಂದು ಕಾಂತೇಶ ಹೇಳಿದರು.

ಸಿದ್ದಣ್ಣ ಅಂಬಲಿ, ಉಜಿನೆಪ್ಪ ಕೋಡಿಹಳ್ಳಿ, ಅಶೋಕ ರಾಣಿಬೆನ್ನೂರ, ಭರಮಪ್ಪ ಉಲುಮಿ, ವಿರೂಪಾಕ್ಷಪ್ಪ ಬಸಾಪುರ ಇದ್ದರು.

Share this article