ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ

KannadaprabhaNewsNetwork |  
Published : Apr 19, 2025, 12:41 AM IST
ಫೊಟೋ: ೧೮ಪಿಟಿಆರ್-ಅವಭೃತಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಶುಕ್ರವಾರ ಸಂಜೆ ಹೊರಟಿತು. | Kannada Prabha

ಸಾರಾಂಶ

ಕಳೆದ ಏ.೧೦ರಿಂದ ಆರಂಭಗೊಂಡ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದಲ್ಲಿ ದೇವರು ಶುಕ್ರವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ವೀರಮಂಗಲದಲ್ಲಿರುವ ಕುಮಾರಧಾರಾ ನದಿ ತಟಾಕದಲ್ಲಿ ಅವಭೃತ ಸ್ನಾನಕ್ಕೆ ತೆರಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕಳೆದ ಏ.೧೦ರಿಂದ ಆರಂಭಗೊಂಡ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದಲ್ಲಿ ದೇವರು ಶುಕ್ರವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ವೀರಮಂಗಲದಲ್ಲಿರುವ ಕುಮಾರಧಾರಾ ನದಿ ತಟಾಕದಲ್ಲಿ ಅವಭೃತ ಸ್ನಾನಕ್ಕೆ ತೆರಳಿದರು.

ದಾರಿಯುದ್ದಕ್ಕೂ ದೇವರಿಗೆ ಕಟ್ಟೆ ಪೂಜೆ ನಡೆಯಿತು. ದೇವಳದಿಂದ ೧೫ ಕಿ.ಮೀ ದೂರದಲ್ಲಿರುವ ವೀರಮಂಗಲ ನದಿ ತಟಾಕದ ತನಕ ೫೭ ಕಟ್ಟೆಗಳಲ್ಲಿ ದೇವರಿಗೆ ಕಟ್ಟೆ ಪೂಜೆ ನಡೆಸಲಾಯಿತು.

ಶುಕ್ರವಾರ ಸಂಜೆ ದೇವರ ಉತ್ಸವಬಲಿ ಗರ್ಭಗುಡಿಯಿಂದ ಇಳಿದು ಬಂದು ಒಳಾಂಗಣದಲ್ಲಿ ಪ್ರದಕ್ಷಿಣಾಕಾರ ಸುತ್ತು ಮುಗಿಸಿದ ಬಳಿಕ ಹೊರಾಂಗಣಕ್ಕೆ ಕಾಲಿಟ್ಟಿತು. ದೇಗುಲದ ಆಗ್ನೇಯ ದಿಕ್ಕಿನಲ್ಲಿರುವ ರಕ್ತೇಶ್ವರಿ ಗುಡಿಯ ಮುಂದೆ ದೇವರ ಆಗಮನವಾಗುತ್ತಿದ್ದಂತೆ ಕೋಲ ರೂಪದಲ್ಲಿ ರಕ್ತೇಶ್ವರಿಯು ದೇವರನ್ನು ಎದುರುಗೊಂಡು ಭಗವಂತನ ಅವಭೃತ ಸವಾರಿಗೆ ಅಪ್ಪಣೆ ನೀಡಿತು. ಇದಾದ ಬಳಿಕ ಶಾರದಾ ಭಜನಾ ಮಂದಿರದ ಬಳಿ ಇರುವ ಓಕುಳಿ ಕಟ್ಟೆಯಲ್ಲಿ ದೇವರು ಪವಡಿಸಿದಾಗ ತಂತ್ರಿವರ್ಯರಿಂದ ಸಂಪ್ರೋಕ್ಷಣೆ ನಡೆಸಲಾಯಿತು.

ಬಳಿಕ ದೇವರು ಮತ್ತು ರಕ್ತೇಶ್ವರಿ ದೈವ ಜತೆಯಾಗಿ ಭಕ್ತರ ಜತೆಗೂಡಿ ಮಂಗಳವಾದ್ಯಗಳ ಜತೆಯಲ್ಲಿ ದೇವರಮಾರುಗದ್ದೆ ಪ್ರವೇಶಿಸಿ ಕಂಬಳ ಗದ್ದೆಯ ಪಾರ್ಶ್ವದಲ್ಲಿರುವ ಭೂತದ ಕಲ್ಲು ಎಂಬ ಐತಿಹಾಸಿಕ ಸ್ಥಳ ತಲುಪಿತು. ಅಲ್ಲಿ ಮತ್ತೊಂದು ಬಾರಿ ರಕ್ತೇಶ್ವರಿಯ ಅಪ್ಪಣೆ ಪಡೆದ ದೇವರು ಅವಭೃತ ಸವಾರಿಗಾಗಿ ದೇವರಮಾರು ಗದ್ದೆಯಿಂದ ಹೊರಟು ಮುಖ್ಯ ರಸ್ತೆಯಲ್ಲಿ ಮುಂದುವರಿಯಿತು. ದೇವರ ಜತೆಯಲ್ಲಿ ಸಾವಿರಾರು ಭಕ್ತರು ಸಾಗಿದರು.

ಪುತ್ತೂರು ಮುಖ್ಯರಸ್ತೆ, ಬಸ್ ನಿಲ್ದಾಣ, ಕಲ್ಲಾರೆ, ರಾಘವೇಂದ್ರ ಮಠ, ದರ್ಬೆ, ಕಾವೇರಿಕಟ್ಟೆ, ಮರೀಲ್, ಪುರುಷರಕಟ್ಟೆ, ಕರೆಮನೆಕಟ್ಟೆ ಮೂಲಕ ಸಾಗುವ ಅವಭೃತ ಸವಾರಿ ಶನಿವಾರ ಮುಂಜಾನೆ ವೀರಮಂಗಲ ತಲುಪಲಿದೆ. ಅಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರನ್ನು ಭೇಟಿಯಾದ ಬಳಿಕ ಕೊನೆಯ ಜಳಕದ ಕಟ್ಟೆಯಲ್ಲಿ ಪವಡಿಸಲಿದ್ದಾರೆ.

ಇಲ್ಲಿ ಪೂಜೆ ನಡೆದು ಸರ್ವಾಲಂಕಾರ ವಿಸರ್ಜನೆಗೊಂಡ ಬಳಿಕ ಜಳಕ ಗುಂಡಿಯಲ್ಲಿ ಪುಣ್ಯಸ್ನಾನ ನಡೆಯಲಿದೆ. ಅವಭೃತ ಮುಗಿದ ಬಳಿಕ ದೇವರು ದೇವಸ್ಥಾನಕ್ಕೆ ಮರಳಲಿದ್ದಾರೆ. ಬಳಿಕ ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''