ರಟ್ಟೀಹಳ್ಳಿ: ಮಾದಿಗ ಸಮುದಾಯದ ಜನ ತಮ್ಮ ಜಾತಿ ಹೆಸರು ಹೇಳಿಕೊಳ್ಳಲು ಮುಜುಗರ ಪಟ್ಟಿಕೊಳ್ಳುತ್ತಿರುವುದು ಸರಿಯಲ್ಲ ಎಂದು ರಾಜ್ಯ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಭಾಸ್ಕರ ಪ್ರಸಾದ ಹೇಳಿದರು.
ನಾವು ಜಾತಿವಾದಿಗಳಲ್ಲ, ನಮ್ಮ ಜಾತಿಯ ಸ್ವಾಭಿಮಾನ ಗಟ್ಟಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ನಮಗೆ ಸಿಗಬೇಕಾದ ಒಳ ಮೀಸಲಾತಿ ಹಕ್ಕು ಪಡೆದು ಮುಂದಿನ ಯುವ ಪೀಳಿಗೆಯ ಉದ್ಧಾರಕ್ಕಾಗಿ ನಮ್ಮ ಹೋರಾಟ ಎಂದರು. ಬಡ್ತಿ ನೇಮಕಾತಿ ಆದೇಶ ತಡೆಯದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರಭುರಾಜ ಕೊಡ್ಲಿ ಮಾತನಾಡಿ, ಒಳಮೀಸಲಾತಿಗಾಗಿ ಬಿ.ಆರ್. ಭಾಸ್ಕರ ಪ್ರಸಾದ ನೇತೃತ್ವದಲ್ಲಿ ರಾಜ್ಯಾದ್ಯಂತ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟದ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಕೆಲವರು ಜಾತಿಯ ಬಣ್ಣ, ರಾಜಕೀಯ ಪ್ರೇರಿತ ಎಂದು ಬಿಂಬಿಸಲು ಹೊರಟಿದ್ದು, ಜೂ. 9ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಒಳ ಮೀಸಲಾತಿ ಪಡೆದು, ಹೋರಾಟದ ಬಗ್ಗೆ ಕೀಳಾಗಿ ಮಾತನಾಡುವವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು.ಕಾರ್ಯಕ್ರಮಕ್ಕೂ ಮುನ್ನ ಮುಂಜಾನೆ 10 ಗಂಟೆಗೆ ಐಬಿ ಸರ್ಕಲ್‍ನಿಂದ ನೂರಾರು ಮಹಿಳೆಯರಿಂದ ಪೂರ್ಣ ಕುಂಭ ಹಾಗೂ ಕ್ರಾಂತಿಕಾರಿ ಒಳ ಮೀಸಲಾತಿ ಹೋರಾಟದ ರಥಯಾತ್ರೆ ಆರಂಭವಾಗಿ ಭಗತ್‍ಸಿಂಗ ವೃತ್ತ, ಮಹಾಲಕ್ಷ್ಮೀ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಬಸ್ ಸ್ಟ್ಯಾಂಡ್ ಸರ್ಕಲ್ ಮೂಲಕ ಕಾರ್ಯಕ್ರಮದ ವೇದಿಕೆ ತಲುಪಿತು.