ಪುಷ್ಕರಣಿ ಜಾಗೆ ಒತ್ತುವರಿ ತೆರವುಗೊಳಿಸದಿದ್ದರೆ ಆಗಸ್ಟ್‌ 22ರಂದು ಹೋರಾಟ

KannadaprabhaNewsNetwork |  
Published : Aug 18, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ಪುಷ್ಕರಣಿ ಸಂರಕ್ಷಣಾ ಸಮಿತಿಯ ಮಾಹಿತಿ ಪ್ರತಿ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಪುಷ್ಕರಣಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸುವಂತೆ ಪಾಲಿಕೆ ಹಾಗೂ ಪುರಾತತ್ವ ಇಲಾಖೆಗೆ ಆ. 5ರಂದು ಮನವಿ ಸಲ್ಲಿಸಲಾಗಿತ್ತು. ಆದರೂ ಪೊಲೀಸ್ ಭದ್ರತೆಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ.

ಹುಬ್ಬಳ್ಳಿ:

ಹಳೇ ಹುಬ್ಬಳ್ಳಿಯ ಐತಿಹಾಸಿಕ ಶ್ರೀಭವಾನಿಶಂಕರ ದೇವಸ್ಥಾನದ ಪುಷ್ಕರಣಿ ಜಾಗೆಯ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಿದರೂ ಹು-ಧಾ ಮಹಾನಗರ ಪಾಲಿಕೆ ಯಾವುದೇ ಕ್ರಮಕೈಗೊಂಡಿಲ್ಲ. ಆ. 22ರೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ ಸ್ವತಃ ಒತ್ತುವರಿ ತೆರವುಗೊಳಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಯೋಜಕ ಸುಧಾಕರ ಶೆಟ್ಟಿ ಎಚ್ಚರಿಸಿದರು.

ಸೋಮವಾರ ಶ್ರೀಭವಾನಿಶಂಕರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಷ್ಕರಣಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸುವಂತೆ ಪಾಲಿಕೆ ಹಾಗೂ ಪುರಾತತ್ವ ಇಲಾಖೆಗೆ ಆ. 5ರಂದು ಮನವಿ ಸಲ್ಲಿಸಲಾಗಿತ್ತು. ಆದರೂ ಪೊಲೀಸ್ ಭದ್ರತೆಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಈಗಾಗಲೇ ಮುಕ್ಕಾಲು ಭಾಗ ಕಾಮಗಾರಿ ಪೂರ್ಣಗೊಂಡಿದೆ. ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಮಾತುಕತೆಯಂತೆ ಮೂರು ದಿನಗಳಲ್ಲಿ ರಸ್ತೆ ತೆರವುಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ, ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಆ. 22ರೊಳಗೆ ಪಾಲಿಕೆ ರಸ್ತೆ ತೆರವುಗೊಳಿಸದಿದ್ದರೆ ಅಕ್ರಮವಾಗಿ ನಿರ್ಮಿಸಿರುವ ರಸ್ತೆಯನ್ನು ನಾವೇ ತೆರವುಗೊಳಿಸಬೇಕಾಗುತ್ತದೆ. ಈ ಹೋರಾಟಕ್ಕೆ ಶ್ರೀರಾಮಸೇನೆ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.

ದೇವಸ್ಥಾನದ ಸುತ್ತಲಿನ 200 ಮೀಟರ್ ಪ್ರದೇಶವನ್ನು ವೈಜ್ಞಾನಿಕವಾಗಿ ಸರ್ವೇ ನಡೆಸಿ ದೇವಸ್ಥಾನದ ಗಡಿ ನಿಗದಿಪಡಿಸಬೇಕು. ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು. ಪುಷ್ಕರಣಿ ಎಂದು ದಾಖಲಾಗಿರುವ ಜಾಗದಲ್ಲಿ ಉತ್ಖನನ ನಡೆಸಿ ಅದು ಚಾಲುಕ್ಯರ ಕಾಲದ್ದೋ ಅಥವಾ ಇತ್ತೀಚಿನದ್ದೋ ಎಂಬುದನ್ನು ಪುರಾತತ್ವ ಇಲಾಖೆ ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಸಹ ಸಂಯೋಜಕ ಜಯತೀರ್ಥ ಕಟ್ಟಿ ಮಾತನಾಡಿ, ದೇವಸ್ಥಾನದ ಜಾಗೆ ಒತ್ತುವರಿಯಾಗುತ್ತಿರುವ ಕುರಿತು ಭಕ್ತರು 2007ರಿಂದಲೂ ಪಾಲಿಕೆ ಹಾಗೂ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಭವಾನಿಶಂಕರ ಹಾಗೂ ನಾರಾಯಣ ದೇವಸ್ಥಾನ ತ್ರಿಕೂಟ ದೇವಾಲಯವಾಗಿದ್ದು, ಇಲ್ಲಿನ ಸಾಲಿಗ್ರಾಮಗಳನ್ನು ಸುಮಾರು 1,400 ವರ್ಷಗಳ ಹಿಂದೆ ನೇಪಾಳದಿಂದ ತರಲಾಗಿದೆ ಎಂಬ ಉಲ್ಲೇಖಗಳಿವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜಕಣಾಚಾರಿ ನಿರ್ಮಿಸಿದ ಈ ದೇವಸ್ಥಾನದ ಪುಷ್ಕರಣಿ ನೀರಿನಿಂದಲೇ ದೇವರ ಪೂಜೆ ಹಾಗೂ ಪುನಸ್ಕಾರ ನಡೆಯುತ್ತಿದ್ದವು ಎಂಬ ಐತಿಹ್ಯವಿದೆ. ಇಂತಹ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆ ವಿಫಲವಾಗಿವೆ. ಆದರೆ, ಈ ಐತಿಹ್ಯವನ್ನು ಉಳಿಸಿಕೊಳ್ಳಲು ಸಮಿತಿ ಬದ್ಧವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಮೇಸ್ತ್ರಿ, ಸಂಚಾಲಕ ಆನಂದ ಬೇಲಕರ, ಸಹ ಸಂಚಾಲಕ ರಾಘವೇಂದ್ರ ಮೆಹರವಾಡೆ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ