ಸೊರಬ: ಸಾರ್ಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕಾದರೆ ಸರ್ಕಾರ ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಾಜಪ್ಪ ಮಾಸ್ತರ್ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ದೇವರಾಜ ಅರಸು ಮುಖ್ಯಮಂತ್ರಿ ಆದ ನಂತರ ಗುರುತಿಸುವ ಪ್ರಯತ್ನ ನಡೆದಿತ್ತು. ಹಳೆ ಮೀಸಲಾತಿ ಅನ್ವಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಾಗಬೇಕಿದೆ. ಸಾಮಾಜಿಕವಾಗಿ 55 ಮಾನದಂಡಗಳ ಆಧಾರದ ಮೇಲೆ ₹160 ಕೋಟಿ ಖರ್ಚು, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನಡೆಸಲಾಗಿರುವ ಸಮೀಕ್ಷೆ ವೈಜ್ಞಾನಿಕವಾಗಿದೆ. ಹಾಗಾಗಿ, ಕಾಂತರಾಜ್ ವರದಿಯನ್ನು ಜಾರಿಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಿಂದುಳಿದ ವರ್ಗಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಹಿಂದುಳಿದ ವರ್ಗಗಳ ಮತ ಪಡೆದು ಸಚಿವರು, ಶಾಸಕರು ವರದಿ ಅನುಷ್ಠಾನಗೊಳಿಸಲು ಹಿಂದೇಟು ಹಾಕುವುದು ಒಳ್ಳೆಯದಲ್ಲ. ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಮಠಾಧೀಶರು, ಸ್ವಾಮೀಜಿಗಳು ಕಾಂತರಾಜ್ ವರದಿ ವಿರೋಧಿಸುತ್ತಿದ್ದಾರೆ. ಸರ್ಕಾರ ಕೂಡ ಪರಿಷ್ಕರಿಸುವ ನೆಪ ಹೇಳದೇ ಜಾರಿಗೆ ತರಬೇಕು. ವರದಿ ಜಾರಿಗೊಳಿಸದಿದ್ದರೆ ನ. 9ರಂದು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಆರ್ಯ ಈಡಿಗ (ದೀವರ) ಸಂಘ ತಾಲೂಕು ಅಧ್ಯಕ್ಷ ಕೆ. ಅಜ್ಜಪ್ಪ, ಮುಸ್ಲಿಂ ಸಮಾಜದ ಅಬ್ದುಲ್ ರಶೀದ್, ಇನಾಯತ್, ಡಿಎಸ್‌ಎಸ್ ಸಂಘಟನಾ ಸಂಚಾಲಕ ಗುರುರಾಜ, ಹಸಲರ ಸಮಾಜದ ಕಲ್ಲಂಬಿ ಹಿರಿಯಣ್ಣ, ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ ತುಮರಿಕೊಪ್ಪ, ಗುಡಿಗಾರ ಸಮಾಜದ ಎಂ.ಎನ್. ಮಧುಸೂದನ್, ದೇವಾಂಗ ಸಮಾಜದ ಶಶಿಧರ್, ಪದ್ಮಸಾಲಿ ಸಮಾಜದ ಪ್ರವೀಣ್ ಹಿರೇಇಡುಗೋಡು ಷಣ್ಮುಖಪ್ಪ, ಹೂವಪ್ಪ, ಜಗದೀಶ ಕೊಡಕಣಿ ಮೊದಲಾದವರು ಹಾಜರಿದ್ದರು.- - - -05ಕೆಪಿಸೊರಬ01:
ಸೊರಬ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಕಾಂತರಾಜ್ ವರದಿ ಜಾರಿಗೊಳಿಸುವಂತೆ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಲಾಯಿತು.