ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಕಡಿಮೆ ದರಕ್ಕೆ ಗುತ್ತಿಗೆ ನೀಡುವ ಆದೇಶ ತಕ್ಷಣ ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ 24 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಸಂಘಟನೆಯ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲೆಯಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರು ಬಾಡಿಗೆ ಮನೆ,
ತೋಟದ ಲೈನ್‌ಮನೆ, ಅಪಾಯಕಾರಿಯಾಗಿರುವ ನದಿ ದಡ,ಬೆಟ್ಟಗುಡ್ಡಗಳ ಮೇಲೆ ಮನೆ ನಿರ್ಮಿಸಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಇರುವ ಆದಿವಾಸಿ, ದಲಿತ ಸಮುದಾಯಗಳು, ಅಲ್ಪಸಂಖ್ಯಾತರು ಸೇರಿದಂತೆ ಬಡ ಕುಟುಂಬಗಳು ಸ್ವಂತ ಮನೆ, ನಿವೇಶನಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ.
ಆದರೆ ಸಂವಿಧಾನದಲ್ಲಿ ಹೇಳಿರುವಂತೆ ಇಲ್ಲಿಯವರೆಗೆ ಮೂಲಭೂತ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಿಜೆಪಿ ನೇತೃತ್ವದ ಸರ್ಕಾರ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ ಜಮೀನನ್ನು ನೀಡಲು ಮುಂದಾಗಿದೆ. ಇದರಿಂದ ಕಡು ಬಡತನದಲ್ಲಿರುವ ಆದಿವಾಸಿ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಂಚನೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನವಿರೋಧಿ ಆದೇಶ ತಕ್ಷಣ ಹಿಂಪಡೆಯಬೇಕು, ಸರ್ಕಾರಿ ಒತ್ತುವರಿ ಜಾಗ ತೆರವುಗೊಳಿಸಿ ಜಿಲ್ಲೆಯ ನಿವೇಶನ ರಹಿತರಿಗೆ ನೀಡಬೇಕು, 2018-19ರಲ್ಲಿ ಮಹಾಮಳೆಯಿಂದ ಮನೆಕಳೆದುಕೊಂಡಿರುವ ನಿವೇಶನ ರಹಿತ ಕುಟುಂಟಗಳಿಗೆ ನಿವೇಶನ ನೀಡಬೇಕು, ನಿರಾಶ್ರಿತರ ಹೊಸ ಪಟ್ಟಿಯನ್ನು ತಯಾರಿಸಬೇಕು ಎಂದು ಒತ್ತಾಯಿಸಿದರು.ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ಆದರೆ ವಿಚಾರಗಳು, ವ್ಯವಸ್ಥೆಗಳು ಬದಲಾಗಿಲ್ಲ. ಅಧಿಕಾರಕ್ಕೆ ಬಂದರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡುತ್ತಾರೆ. ಆದಿವಾಸಿಗಳ
ಹಾಡಿಗಳಿ ಭೇಟಿ ನೀಡುವ ಜನಪ್ರತಿನಿಧಿಗಳು ಇಲ್ಲಿಯವರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಸಿಐಟಿಯು ಖಜಾಂಚಿ ಎನ್.ಡಿ.ಕುಟ್ಟಪ್ಪನ್, ಸಹ ಕಾರ್ಯದರ್ಶಿಗಳಾದ ಕೆ.ಎಸ್.ಶಾಜಿ ರಮೇಶ್, ಕೆ.ಕೆ.ಹರಿದಾಸ್ ಸುದ್ದಿಗೋಷ್ಠಿಯಲ್ಲಿದ್ದರು.