ರಾಷ್ಟ್ರೀಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ

KannadaprabhaNewsNetwork |  
Published : Nov 06, 2025, 03:15 AM IST
 ರೈತರು ಆರಂಭಿಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಕಾರ್ಯಕರ್ತರ ಪ್ರತಿಭಟನೆ  | Kannada Prabha

ಸಾರಾಂಶ

ಪ್ರತಿ ಟನ್ ಕಬ್ಬಿಗೆ ₹3500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಆರಂಭಿಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರ ಹೊರವಲಯದ ಸುವರ್ಣ ವಿಧಾನ ಸೌಧ ಎದುರಿನಲ್ಲಿ ಬುಧವಾರ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

ಕನ್ನಡ ಪ್ರಭ ವಾರ್ತೆ ಬೆಳಗಾವಿ

ಪ್ರತಿ ಟನ್ ಕಬ್ಬಿಗೆ ₹3500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಆರಂಭಿಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರ ಹೊರವಲಯದ ಸುವರ್ಣ ವಿಧಾನ ಸೌಧ ಎದುರಿನಲ್ಲಿ ಬುಧವಾರ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

ಸುವರ್ಣ ಸೌಧ ಪ್ರವೇಶದ ದ್ವಾರದ ಎದುರಿಗೆ ಸೇರಿದ ಕಾರ್ಯಕರ್ತರು ರಸ್ತೆ ಮಧ್ಯೆ ಧರಣಿ ಕುಳಿತು ಟೈರ್‌ಗೆ ಬೆಂಕಿಯಿಟ್ಟು, ಎರಡೂ ಬದಿಯ ಸಂಚಾರವನ್ನು ತಡೆದು ತೀವ್ರ ಆಕ್ರೋಶ ಹೊರಹಾಕಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಪ್ರತಿಭನೆಯನ್ನುದ್ದೇಶಿಸಿ ಮಾತನಾಡಿ, ರೈತರು ಇಷ್ಟೆಲ್ಲ ಹೋರಾಟ ಮಾಡುತ್ತಿದ್ದರೂ ಸರ್ಕಾರ ಬೇಡಿಕೆಗೆ ಸ್ಪಂದಿಸಿ ಬೆಲೆ ನಿಗದಿ ಮಾಡದಿರುವುದು ಖಂಡನಾರ್ಹ. ಈಗಾಗಲೇ ಆರಂಭಗೊಂಡಿರುವ ರೈತರ ಹೋರಾಟಕ್ಕೆ ಕರವೇ ಸಹ ಬೆಂಬಲ ವ್ಯಕ್ತಪಡಿಸುತ್ತಿದೆ. ಆದಷ್ಟು ಬೇಗ ಮುಖ್ಯಮಂತ್ರಿಗಳು ರೈತರ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವೇ ಹೋದಲ್ಲಿ ಮುಂದೆ ರೈತರು ಕೈಗೊಳ್ಳುವ ಎಲ್ಲ ರೀತಿಯ ಹೋರಾಟಕ್ಕೂ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ ಮಾತನಾಡಿ, ರಾತ್ರಿ, ಹಗಲು, ಚಳಿ, ಮಳೆ, ಬಿಸಿಲೆನ್ನದೇ ಕಳೆದ ಏಳು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಜೈ ಜವಾನ್- ಜೈ ಕಿಸಾನ್ ಎನ್ನುವ ಸರ್ಕಾರಗಳು ರೈತರ ಬೇಡಿಕೆ ಈಡೇರಿಸಲು ಮುಂದಾಗದೇ ಇರುವುದು ನಾಚಿಕೆಗೇಡಿನ ಸಂಗತಿ. ದೇಶದ ಅಸ್ಮಿತೆ ಆಗಿರುವ ರೈತರನ್ನು ಬದುಕಿಸುವ ಕೆಲಸವನ್ನು ಶಾಸಕರು, ಸಚಿವರು ಮಾಡಬೇಕು ಎಂದು ಆಗ್ರಹಿಸಿದರು.ಕೆಲಹೊತ್ತು ರಸ್ತೆ ಮಧ್ಯದಲ್ಲಿಯೇ ಧರಣಿ ಕುಳಿತ ಕಾರ್ಯಕರ್ತರನ್ನು ಪೊಲೀಸರು ಮನವೊಲಿಸಲು ಯತ್ನಿಸಿದರೂ ಸ್ಪಂದಿಸಲಿಲ್ಲ. ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಯಿತು.ಹೆದ್ದಾರಿ ತಡೆದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ತೀವ್ರವಾಗಿ ಪರದಾಡಿದರು. ಸರ್ವೀಸ್ ರಸ್ತೆಯಲ್ಲೂ ವಾಹನಗಳನ್ನು ತಡೆದ ಕರವೇ ಕಾರ್ಯಕರ್ತರು, ಕಬ್ಬು ಬೆಳೆಗಾರರ ಬೇಡಿಕೆ ತಕ್ಷಣ ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ ಸೇರಿ ಇನ್ನಿತರೆ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ತಮ್ಮ ವಾಹನದಲ್ಲಿ ಕರೆದೊಯ್ದರು. ನಂತರ ರಸ್ತೆ ಸಂಚಾರ ಮುಕ್ತಗೊಳಿಸಿದರು. ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಭೂಪಾಲ್ ಅತ್ತು, ಸಿದ್ರಾಯ ನಾಯಿಕ, ರಮೇಶ ಯರಗನ್ನರ, ಮಧು ಇಟಗಿ ಸೇರಿ ಮತ್ತಿತರು ಪಾಲ್ಗೊಂಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲ್ಕಿಸೀಮೆ ಅರಸು ಕಂಬಳ ಸಂಪನ್ನ
ಹಾವೇರಿ ವಿವಿ ನೂತನ ಗಣಕಯಂತ್ರ ವಿಭಾಗ ಉದ್ಘಾಟನೆ