ಭದ್ರಾ ನೀರಿಗೆ ಪ್ರತಿಭಟನೆ: ಪ್ರಜಾಸೇವೆ ಉದ್ಘಾಟನೆ ರದ್ದು

KannadaprabhaNewsNetwork |  
Published : Sep 13, 2026, 02:00 AM IST
ಕನ್ನಡ ಪ್ರಭ ಚಿತ್ರ 1 ದಿ 12 ಎಂಬಿಆರ್  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆ ಕಾರ್ಯಕ್ರಮದ ಹೋಬಳಿ ಮಟ್ಟದ ಸಭೆಯು ಭದ್ರಾ ನಾಲೆ ನೀರು ಸಮಸ್ಯೆ ಭುಗಿಲೆದ್ದ ಕಾರಣ ರದ್ದು ಮಾಡಲಾಯಿತು.

- ದಾವಣಗೆರೆ ಜಿಲ್ಲೆ‌ಗೆ ಡಿಸಿಯೋ, ಶಾಮನೂರು ಕುಟುಂಬಕ್ಕೆ ಮಾತ್ರ ಡಿಸಿಯೋ ಎಂದ ಶಾಸಕ

- ಭದ್ರಾ ನೀರು ಹರಿಸಲು ಪಟ್ಟು: ದಾವಣಗೆರೆ ವಾಪಸಾದ ಡಿಸಿ ವರ್ತನೆಗೆ ಕೆಲವರ ಖಂಡನೆ

- - -

ಮಲೇಬೆನ್ನೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆ ಕಾರ್ಯಕ್ರಮದ ಹೋಬಳಿ ಮಟ್ಟದ ಸಭೆಯು ಭದ್ರಾ ನಾಲೆ ನೀರು ಸಮಸ್ಯೆ ಭುಗಿಲೆದ್ದ ಕಾರಣ ರದ್ದು ಮಾಡಲಾಯಿತು.

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯಲ್ಲಿ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್‌ ಅಧ್ಯಕ್ಷತೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಪಟ್ಟಣದ ಮುಖ್ಯ ವೃತ್ತದಲ್ಲಿ ಅಡ್ಡಗಟ್ಟಿ ಭದ್ರಾ ನಾಲೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕ ಬಿ.ಪಿ. ಹರೀಶ್ ಹಾಗೂ ರೈತರು ಪ್ರಶ್ನೆಗಳ ಸುರಿಮಳೆ ಗೈದರು.

ಡಿಸಿ ನೀಡಿದ ಉತ್ತರಕ್ಕೆ ಪ್ರತಿಭಟನಾಕಾರರು ತೃಪ್ತರಾಗದೇ ನೀವು ದಾವಣಗೆರೆ ಜಿಲ್ಲೆ‌ ಡಿಸಿಯೋ ಅಥವಾ ಶಾಮನೂರು ಕುಟುಂಬಕ್ಕೆ ಮಾತ್ರ ಡಿಸಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರ ಹಿತ ಕಾಪಾಡುವ ಸಭೆ ಮಾಡುವುದಾದರೆ ಭದ್ರಾ ನಾಲೆಗೆ ನೀರು ಹರಿಸಿ ಸಭೆ ಮಾಡಿ ಎಂದು ಪಟ್ಟುಹಿಡಿದರು. ಕೊನೆಗೆ ಡಿಸಿ ವಾಪಸ್ ತೆರಳಿದರು.

ಸಭಾ ಸ್ಥಳದಲ್ಲಿ ಒಂದು ಗುಂಪು ಜಮಾಯಿಸಿ ಡಿಸಿ ವರ್ತನೆ ಖಂಡಿಸಿತು. ಭದ್ರತೆಯಲ್ಲಿ ಸಭೆ ನಡೆಸುವ ಬದಲು ಶಾಸಕರಿಗೆ ಹೆದರಿ ಡಿಸಿ ತೆರಳಿದ್ದಾರೆ ಎಂದು ಡಿಸಿ ವಿರುದ್ಧ ಪೋಷಣೆ ಹಾಕಿದರು. ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಬಂದ ವೃದ್ಧರು, ಮಹಿಳೆಯರು, ಅಂಗವಿಕಲರ ಗೋಳನ್ನು ಕೇಳುವವರಿಲ್ಲದಾಯಿತು. ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯಬೇಕಿದ್ದ ಸಭೆ ರದ್ದಾದ ಕಾರಣ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಮೊದಲೇ ಮಳೆಯಿಲ್ಲ, ಜಲಾಶಯದ ನೀರು ಸಹ ಬಿಟ್ಟಿಲ್ಲ. ಹತ್ತಿಪ್ಪತ್ತು ವರ್ಷಗಳ ತೋಟಗಳು ನೀರಿಲ್ಲದೇ ಒಣಗುತ್ತಿವೆ. ಮೆಕ್ಕೆಜೋಳ, ರಾಗಿ ಮುಂತಾದ ಬೆಳೆಗಳು ಒಣಗಿವೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೊಕ್ಕನೂರಿನ ರೈತ ಮುಖಂಡ ಅಭಿನಂದನ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

- - -

(ಟಾಪ್‌ ಕೋಟ್‌) ಉಸ್ತುವಾರಿ ಸಚಿವರು ತುಂಗಭದ್ರಾ ನದಿಗೆ ತೋರಿಸುವ ಆಸಕ್ತಿ ಭದ್ರಾ ಕಾಲುವೆಗೆ ನೀರು ಹರಿಸಲು ತೋರುತ್ತಿಲ್ಲ. ತುಂಗಾಭದ್ರಾ ನದಿಗೆ ನೀರು ಬಿಡುವುದು ತಮ್ಮ ಶುಗರ್ ಫ್ಯಾಕ್ಟರಿಗೆ ಅನುಕೂಲವಾಗುವ ಸ್ವಾರ್ಥದಿಂದ. ದೇವರಬೆಳಕೆರೆ ಪಿಕಪ್ ನೀರು ಹರಿಸಲು ಜಿಲ್ಲಾಧಿಕಾರಿ ಅವೈಜ್ಞಾನಿಕ ಕ್ರಮ ಅನುಸರಿಸಿರುವುದು ಖಂಡನೀಯ.

- ಬಿ.ಪಿ. ಹರೀಶ್, ಶಾಸಕ, ಹರಿಹರ ಕ್ಷೇತ್ರ.

- - -

-ಫೋಟೋ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಪ್ರದೀಪ್
ವಿಕಸಿತ ಭಾರತ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ