ಕೃಷಿ ಜಮೀನು, ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯ
ಮುಂಡಗೋಡ ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ಧರ್ಮಾ ಕಾಲನಿಯ ನಿವಾಸಿಗಳು ತಮ್ಮ ದಶಕಗಳ ಬೇಡಿಕೆಯಾದ ಕೃಷಿ ಜಮೀನು ಮತ್ತು ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸೋಮವಾರ ಕಾರವಾರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು. ಕಾರವಾರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಧರ್ಮಾಕಾಲನಿ ನಾಗರಿಕರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಗಣಪತಿ ಹೆಗಡೆ, 1964ರಲ್ಲಿ ಧರ್ಮಾ ಜಲಾಶಯ ನಿರ್ಮಾಣವಾದಾಗ ಮನೆ-ಮಠ ಹಾಗೂ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರವು ಜನಗೇರಿ ಮತ್ತು ವೀರಾಪುರ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಿತ್ತು. ಅಂದು ಭೂಮಿಯನ್ನು ಅಳತೆ ಮಾಡಿ ಜಂಟಿ ಪಹಣಿ ನೀಡಲಾಗಿತ್ತಲ್ಲದೆ, ಮಳಗಿ ಗ್ರಾಪಂನಿಂದ ಮನೆ ನಂಬರ್ ನೀಡಲಾಗಿತ್ತು. ಆದರೆ, ಇಂದಿನವರೆಗೂ ಕೆಜೆಪಿ ಪ್ರಕ್ರಿಯೆ ನಡೆಯದ ಕಾರಣ, ಈಗ ಅರಣ್ಯ ಇಲಾಖೆಯು ಈ ಜಮೀನು ತಮಗೆ ಸೇರಿದ್ದೆಂದು ವಾದಿಸುತ್ತಿದೆ. ಇಲಾಖೆಯ ಈ ಕ್ರಮದಿಂದ ನಿರಾಶ್ರಿತರು ಆತಂಕಕ್ಕೊಳಗಾಗಿದ್ದಾರೆ ಎಂದು ವಿವರಿಸಿದರು.ಕಂದಾಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಕೂಡಲೇ ಜಂಟಿ ಪಹಣಿ ಪದ್ಧತಿಯನ್ನು ರದ್ದುಗೊಳಿಸಿ, ಪ್ರತಿಯೊಬ್ಬ ರೈತನ ಹೆಸರಿಗೆ ಪ್ರತ್ಯೇಕ ಪಹಣಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಎಲ್ಲಾ ನಿವಾಸಿಗಳಿಗೆ ಅಧಿಕೃತ ನಿವೇಶನ ಹಕ್ಕುಪತ್ರ ವಿತರಿಸಲು ಜಿಲ್ಲಾಡಳಿತವು ತಕ್ಷಣವೇ ಸರ್ವೆ ಕಾರ್ಯ ನಡೆಸಿ ನಕ್ಷೆ ತಯಾರಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಸರ್ಕಾರಿ ವ್ಯವಸ್ಥೆಯ ಜಡ್ಡುಗಟ್ಟಿದ ಧೋರಣೆಯಿಂದಾಗಿ ಧರ್ಮಾ ಕಾಲನಿಯ ಜನರು ದಶಕಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ನಮ್ಮ ಸಂಘಟಿತ ಹೋರಾಟ ಮುಂದುವರಿಯಲಿದೆ. ಈ ಹೋರಾಟವು ಜಿಲ್ಲೆಯ ಇತರ ರೈತ ಮತ್ತು ಕಾರ್ಮಿಕರ ಹೋರಾಟಗಳಿಗೆ ಮಾದರಿಯಾಗಲಿದೆ ಎಂದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ನಿರಾಶ್ರಿತರ ಬೇಡಿಕೆ ನ್ಯಾಯಯುತವಾಗಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.ಹೋರಾಟ ಸಮಿತಿಯ ಪ್ರಮುಖರಾದ ಜೀವನ್ ಚಕ್ರಸಾಲಿ, ದುರ್ಗಜ್ಜ, ಜಯದೇವ ನಿಲೇಕಣಿ, ವೀರೇಂದ್ರ ನಾಯ್ಕ್, ವಿನಾಯಕ್ ಎಂ. ನಾಯ್ಕ್, ಚೌಡಪ್ಪ ನಾಯ್ಕ್, ಚಂದ್ರು ಹರಿಜನ, ಆನಂದ ಲಮಾಣಿ, ಗಣೇಶ್ ನಾಯ್ಕ್, ಭವಾನಿ ಶಂಕರ್ ಎಸ್. ಗೌಡ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.