ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪ ವೃತ್ತದಲ್ಲಿ ಸೇರಿದ ಸಾವಿರಾರು ಸಂಖ್ಯೆಯ ರೈತರು, ಟನ್ ಕಬ್ಬಿಗೆ ₹5,500 ಬೆಲೆ ನಿಗಧಿ ಮಾಡಬೇಕು. ಹಾಲಿನ ದರ ₹10 ಹೆಚ್ಚಿಸಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಬಳಿಕ ವೃತ್ತದಿಂದ ಪಟ್ಟಣದ ಕೆಆರ್ ಎಸ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಪೊಲೀಸ್ ಠಾಣೆ ರಸ್ತೆ ಮೂಲಕ ಹಳೇ ನಾಗಮಂಗಲ ರಸ್ತೆ, ಕೆನ್ನಾಳು, ರೈಲ್ವೆ ನಿಲ್ದಾಣ ಮಾರ್ಗವಾಗಿ ಬೈಕ್ ರ್‍ಯಾಲಿ ಮೂಲಕ ಶ್ರೀರಂಗಪಟ್ಟಣದ ಗಣಂಗೂರು ಬಳಿಯ ಹೈವೇ ಟೋಲ್ ಬಳಿ ಜಮಾವಣೆಗೊಂಡರು.ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರಗಾಲ ಎದುರಾಗಿದೆ. ಬರಗಾಲ ಎದುರಾದಾಗ ಸರ್ಕಾರಗಳು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ರ್‍ಯಾಲಿಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಕಾರ್ಯದರ್ಶಿ ವೈ.ಜಿ.ರಘು ಮುಖಂಡರಾದ ಹರವು ಪ್ರಕಾಶ್, ರಾಘವಪ್ರಕಾಶ್, ದರ್ಶನ್, ಅನಿಲ್ ಇತರರು ಇದ್ದರು.