ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಹೆಬ್ಬಾಳ ಚೆನ್ನಯ್ಯ ನಾಲೆಯ 19ನೇ ವಿತರಣಾ ನಾಲಾ ವ್ಯಾಪ್ತಿಗೆ ಬರುವ ಎಸ್.ಐ.ಹಾಗಲಹಳ್ಳಿ, ಎಚ್.ಹೊಸಹಳ್ಳಿ, ಮುಡೀನಹಳ್ಳಿ ಮತ್ತು ತೊರೆಬೊಮ್ಮನಹಳ್ಳಿ ಸೇರಿದಂತೆ ಅಕ್ಕಪಕ್ಕ ಗ್ರಾಮಗಳ ವ್ಯಾಪ್ತಿಯ ರೈತರು ಕಾವೇರಿ ನೀರಾವರಿ ನಿಗಮದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಮಲ್ಲೇಶ್ ಮಾತನಾಡಿ, ಬೇಸಿಗೆ ನೀರು ಹರಿಸುವ ಸಂಬಂಧ ನಿಗಮದ ಅಧಿಕಾರಿಗಳು ಸರಿಯಾದ ನಿರ್ಧಾರ ಕೈಗೊಂಡಿಲ್ಲ. ಧಿಡೀರ್ ನೀರು ನಿಲ್ಲಿಸಿ ಬೆಳೆಗಳು ಒಣಗುವಂತೆ ಮಾಡಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿತನದಿಂದ ರೈತರ ಬೆಳಗಳಿಗೆ ನೀರಿಲ್ಲದೆ ಒಣಗುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾಲೆಗಳಿಗೆ ನೀರು ಬಿಟ್ಟಾಗ ನಿಗಮದ ಅಧಿಕಾರಿಗಳು ಒಂದೇರಡು ದಿನ ನೀರು ಹರಿಸಿ ಸುಮ್ಮನಾಗುತ್ತಾರೆ. ಪ್ರತಿ ಬಾರಿಯೂ ಇದೇ ರೀತಿ ರೈತರಿಗೆ ಅನ್ಯಾಯವಾಗುತ್ತಿದೆ. ಕೊನೇ ಭಾಗದ ರೈತರ ಸ್ಥಿತಿ ಅರಿತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಕ್ಷಣ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನಿಗಮದ ಸಹಾಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಲಿಂಗಯ್ಯ ಮಾತನಾಡಿ, ಕೊನೇ ಭಾಗದ ಬೆಬ್ಬಾಳ ಚನ್ನಯ್ಯ ನಾಲೆ 19ನೇ ವಿತರಣಾ ನಾಲಾ ವ್ಯಾಪ್ತಿಯ ರೈತರ ಬೆಳಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಏ.23ರಂದು ನೀರು ಹರಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಕರೀಗೌಡ, ರಾಮಣ್ಣ, ರಾಜಣ್ಣ, ಹಾಗಲಹಳ್ಳಿ ಮಹದೇವ್, ಪ್ರಭ, ಮುಡೀನಹಳ್ಳಿ ಸೂರಿ, ರಾಮ ಸೇರಿದಂತೆ ಮತ್ತಿತರಿದ್ದರು.