ರಾಣಿಬೆನ್ನೂರು ತಾಲೂಕಿನ ತರೇದಹಳ್ಳಿ ಗ್ರಾಮದಲ್ಲಿನ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಯು ಕೋಳಿ ಸಾಕಾಣಿಕೆ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಂಪನಿ ಎದುರಿನಲ್ಲಿ ನ.16ರಂದು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಹಾವೇರಿ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಓಲೇಕಾರ ತಿಳಿಸಿದರು.
ರಾಣಿಬೆನ್ನೂರು: ತಾಲೂಕಿನ ತರೇದಹಳ್ಳಿ ಗ್ರಾಮದಲ್ಲಿನ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಯು ಕೋಳಿ ಸಾಕಾಣಿಕೆ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಂಪನಿ ಎದುರಿನಲ್ಲಿ ನ.16ರಂದು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಹಾವೇರಿ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಓಲೇಕಾರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪನಿಯವರು 2021ರಿಂದ ತಾವು ಖರೀದಿಸುವ ಕೋಳಿ ದರವನ್ನು ಕೆಜಿಗೆ 50ಯಂತೆ ಪ್ರತಿ ವರ್ಷ ಹೆಚ್ಚಿಸುವ ವಾಗ್ದಾನ ಮಾಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಕೆಜಿ ಕೋಳಿಗೆ ಕೇವಲ 6.50 ದರದಂತೆ ಖರೀದಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಮಾರುಕಟ್ಟೆಯಲ್ಲಿ ಕೋಳಿ ಸಾಕಾಣಿಕೆಗೆ ಬೇಕಾಗುವ ಕಟ್ಟಿಗೆ, ಕೊಳಲಿ, ಕರೆಂಟ್ ಬಿಲ್, ಸುಣ್ಣ, ಫಿನಾಯಿಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯು 2021ರ ದರಕ್ಕೆ ಹೊಲಿಸಿದರೆ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿವೆ. ಇದಲ್ಲದೆ ಕಂಪನಿ ವತಿಯಿಂದ ಕೋಳಿ ಸಾಕುವ ರೈತರಿಗೆ ಪೂರೈಕೆ ಮಾಡುವ ಕೋಳಿ ಮರಿಗಳು ಆರೋಗ್ಯಕರವಾಗಿಲ್ಲ. ಹೀಗಾಗಿ ಅವು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿಲ್ಲ. ಇದರಿಂದ ನಿಗದಿತ ಪ್ರಮಾಣದಲ್ಲಿ ಇಳುವರಿ ಲಭಿಸುತ್ತಿಲ್ಲ. ಪ್ರಸ್ತುತ ತಾಲೂಕಿನಲ್ಲಿ 2 ಸಾವಿರ ಕುಟುಂಬಗಳು ಕೋಳಿ ಸಾಕಾಣಿಕೆ ಮೇಲೆ ಅವಲಂಬಿತವಾಗಿವೆ. ಮತ್ತೊಂದು ಅಚ್ಚರಿ ಎಂದರೆ ಬೇರೆ ಕಂಪನಿಗಳು ಕೋಳಿಗಳಿಗೆ ಉತ್ತಮ ದರ ನೀಡಿ ಖರೀದಿ ಮಾಡುತ್ತಿವೆ. ವೆಂಕಟೇಶ್ವರ ಹ್ಯಾಚರೀಸ್ ಕಂಪನಿ ಮಾತ್ರ ಹಳೆ ದರದಲ್ಲಿಯೇ ಖರೀದಿ ಮಾಡುತ್ತಿದೆ. ಆದ್ದರಿಂದ ಕಂಪನಿ ಎದುರು ನ.16ರಂದು ಬೆಳಗ್ಗೆ 11ರಿಂದ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.