ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಲಿದೆ.
ಹುಬ್ಬಳ್ಳಿ:
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಮೇ 30ರಂದು ಬೆಳಗ್ಗೆ 10ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಳವಳಿಯ ರಾಜ್ಯ ಸಂಚಾಲಕ ಶಿವಾನಂದ ಮುತ್ತಣ್ಣವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಕರಣ ಚಳವಳಿ ಹಾಗೂ ಮಹದಾಯಿ, ಕಳಸಾ-ಬಂಡೂರಿ ಚಳವಳಿ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಅಂದು ಬೆಳಗ್ಗೆ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ನಂತರ ಚೆನ್ನಮ್ಮ ವೃತ್ತದ ಮೂಲಕ ಚಿಟಗುಪ್ಪಿ ಆಸ್ಪತ್ರೆ ಆವರಣದ ಬಳಿಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಆಗಮಿಸಿ ಸಮಾವೇಶಗೊಳ್ಳಲಿದೆ. ನಂತರ ಬೇಡಿಕೆಯ ಮನವಿ ಸಲ್ಲಿಸಲಾಗುವುದು. ಕನ್ನಡ ಚಲನಚಿತ್ರ ರಂಗದ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಕನ್ನಡದ ಮಹನೀಯರ ಹೆಸರು ನಾಮಕರಣ ಮಾಡುವ ಕುರಿತು ರಾಜ್ಯ ಸರ್ಕಾರ ಕಳೆದ 2 ವರ್ಷಗಳ ಹಿಂದೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ, ಶಿವಮೊಗ್ಗ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ವಿಜಯಪುರ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕಾರಣ ಮಾಡಬೇಕು. ಬೆಂಗಳೂರಿನ 2ನೇ ಟರ್ಮಿನಲ್‌ಗೆ ಡಾ. ರಾಜಕುಮಾರ ಅವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ಹೇಮನಗೌಡ ಬಸನಗೌಡರ ಮಾತನಾಡಿ, ಮಹದಾಯಿ ವಿಷಯವನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿಲ್ಲ. ಈ ಭಾಗದ ಪ್ರಮುಖ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ತಾಲೂರ, ಬಸವರಾಜ ಅಗಸಿಮನಿ, ವೆಂಕಟೇಶ ಸಟ್ಟಿ, ಪಾಂಡು ಭಜಂತ್ರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.