ಕನ್ನಡಪ್ರಭ ವಾರ್ತೆ ತಾಳಿಕೋಟೆ
ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತಾಳಿಕೋಟೆಯ ವೈದ್ಯರ ಸಂಘದ ನೇತೃತ್ವದಲ್ಲಿ ಎಲ್ಲ ವೈದ್ಯರು ತುರ್ತು ಸೇವೆಗಳನ್ನು ಹೊರತುಪಡಿಸಿ, ಪಟ್ಟಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರಲ್ಲದೇ ಭಾರತೀಯ ವೈದ್ಯಕೀಯ ಸಂಘ ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಈ ಸಮಯದಲ್ಲಿ ವೈದ್ಯರಾದ ಡಾ.ರವಿ ಅಗರವಾಲಾ ಮಾತನಾಡಿ, ವೈದ್ಯ ನಾರಾಯಣೋ ಹರಿ ಎಂಬ ಗಾದೆಯಾಗಿದೆ. ಆದರೆ, ಯಾವ ವೈದ್ಯರು ನಾರಾಯಣರಾಗಿ ಉಳಿಯಲ್ಲಿಕ್ಕೆ ಪಟ್ಟಭದ್ದ ಹಿತಾಶಕ್ತಿಗಳು ಬಿಡುತ್ತಿಲ್ಲ. ವೈದ್ಯರ ಮೇಲೆ ಮೇಲಿಂದ ಮೇಲೆ ಹಲ್ಲೆಗಳು ನಡೆಯುತ್ತ ಸಾಗಿವೆ. ಇತ್ತೀಚಿಗೆ ಈ ಘಟನೆಗಳು ಹೆಚ್ಚಿಗೆ ಆಗುತ್ತಿರುವುದನ್ನು ನೋಡಿದರೇ ವೈದ್ಯರು ಸೇವಾ ವೃತ್ತಿಯಿಂದ ಹಿಂದಕ್ಕೆ ಸರಿಯಬೇಕೆನ್ನಿಸುತ್ತಿದ್ದು ಪಶ್ಚಿಮ ಬಂಗಾಳದ ಕೋಲ್ಕತಾದ ಆರ್.ಜಿ.ಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯಯವರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ವೈದ್ಯ ಸಮೂಹಕ್ಕೆ ಮಾಡಿದ ಘೋರ ಅಪರಾಧವಾಗಿದೆ. ಇದು ಆಳುವ ಸರ್ಕಾರಗಳ ವೈಪಲ್ಯವನ್ನು ಮತ್ತು ಕಾನೂನಿನ ವೈಪಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಪ್ರಕರಣದಿಂದ ವೈದ್ಯರುಗಳು ಸೇವಾ ಮನೋಸ್ಥೈರ್ಯ ಕುಗ್ಗುವಂತೆ ಮಾಡಿದ್ದು, ಇದನ್ನು ವೈದ್ಯರು/ಆಸ್ಪತ್ರೆ ಸಂಘಟನೆಯು ಗಂಭೀರವಾಗಿ ಖಂಡಿಸುತ್ತದೆ ಎಂದರು.ಹಿರಿಯ ವೈದ್ಯ ಡಾ.ಎಲ್.ಎನ್.ಶೆಟ್ಟಿ ಮಾತನಾಡಿ, ಆಳುವ ಸರ್ಕಾರಗಳು ಕಾನೂನಿಗೆ ತೊಡಕಾಗದಂತೆ ನೋಡಿಕೊಂಡರೆ ಇಂತಹ ಪ್ರಕರಣಗಳು ನಡೆಯುವುದನ್ನು ತಡೆಯಬಹುದಾಗಿದೆ. ಇಂತಹ ಅಹಿತಕರ ಪ್ರಕರಣಗಳು ಮರುಕಳಿಸದಂತೆ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸಿ ವೈದ್ಯರ ಮನೋಸ್ಥೈರ್ಯವನ್ನು ಹೆಚ್ಚಿಸುವಂತೆ ಮಾಡಬೇಕಿದೆ ಮತ್ತು ನಿರ್ಭೀತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡಲು ಅವಕಾಶ ಕಲ್ಪಿಸಬೇಕು. ಯುವ ವೈದ್ಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಖಂಡನೀಯವಾಗಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ ಮಾತನಾಡಿ, ಯುವ ವೈದ್ಯೆಯ ಮೇಲೆ ಅತ್ಯಾಚಾರ ವೆಸಗಿ ಹತ್ಯಮಾಡಿರುವುದು ಖಂಡನಿಯವಾಗಿದ್ದು, ಇಂದು ತುರ್ತುಸೇವೆ ಹೊರತುಪಡಿಸಿ ಇತರೆ ಎಲ್ಲ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿ ಭಾರತೀಯ ವೈದ್ಯಕೀಯ ಸಂಘವು ಪ್ರತಿಭಟನೆಗೆ ಕರೆ ನೀಡಿದಂತೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ ನಡೆಸಲಾಗಿದೆ. ತಪ್ಪಿತಸ್ಥರಿಗೆ ಕಠಿಣಶಿಕ್ಷೆಯಾಗದಿದ್ದಲ್ಲಿ ಪ್ರತಿಭಟನಾ ದಾರಿ ಉಗ್ರಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.ವೈದ್ಯರ ಸಂಘ ಕೈಗೊಂಡ ಪ್ರತಿಭಟನೆಗೆ ರಕ್ತ ತಪಾಸಣಾ ಹಾಗೂ ಅರೆವೈದ್ಯಕೀಯ ಸಂಘ, ನರ್ಸಸ್‌ಗಳ ಸಂಘದವರು ಬೆಂಬಲವನ್ನು ಸೂಚಿಸಿದರು.
ಪ್ರತಿಭಟನಾಕಾರರು ರಾಷ್ಟ್ರಪತಿಗೆ ಹಾಗೂ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಸಲ್ಲಿಸಿದರು.ಈ ಸಮಯದಲ್ಲಿ ವೈದ್ಯರಾದ ಡಾ.ವಿಜಯಲಕ್ಷ್ಮೀ ಕಾರ್ಚಿ, ಗಂಗಾಂಬಿಕಾ ಪಾಟೀಲ, ಡಾ.ಎ.ಎ.ನಾಲಬಂದ, ಡಾ.ನಜೀರ ಕೋಳ್ಯಾಳ, ಡಾ.ಶಿವನಗೌಡ ಪಾಟೀಲ, ಡಾ.ಗುರು ಚಿತ್ತರಗಿ, ಡಾ.ಅಮಲ್ಯಾಳ, ಡಾ.ಕಮಲಾ ಸಜ್ಜನ, ಡಾ.ಗೀರಿಶ ಯಾದವಾಡ, ಡಾ.ಸೋಹಿಲ್, ಡಾ.ಶಬ್ಬೀರ, ಡಾ.ಐ.ಬಿ.ತಳ್ಳೊಳ್ಳಿ, ಡಾ.ಪ್ರಭುಗೌಡ ಬಿರಾದಾರ, ಡಾ.ವಿಜಯಲಕ್ಷ್ಮೀ ಹಜೇರಿ, ಡಾ.ಮಧು ಅಗರವಾಲಾ, ಡಾ.ಶಾಂತಾ ಇಬ್ರಾಹಿಂಪೂರ ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.