ಕೊಪ್ಪಳ: ಬೆಲೆ ಏರಿಕೆ ಖಂಡಿಸಿ ಏ.೨ರಿಂದ ವಿಧಾನ ಸೌಧ ಹಾಗೂ ಮಧ್ಯಾಹ್ನದಿಂದ ಅಹೋರಾತ್ರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸಗೂರು ಹೇಳಿದರು.
ಸರ್ಕಾರ ಬಡವರ ಮೇಲೆ ತೆರಿಗೆ ಭಾರ ಹಾಕುತ್ತಿದೆ. ಕಸ ಸಂಗ್ರಹಕ್ಕೂ ಹಾಗೂ ಲಿಪ್ಟ್ ಏರುವುದಕ್ಕೂ ಬೆಲೆ ಏರಿಕೆ ಮಾಡಿದೆ. ಗ್ಯಾರಂಟಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದೆ ಎಂದರು.
ಕಾಂಗ್ರೆಸ್ ಚುನಾವಣಾ ಗಿಮಿಕ್ ಮಾಡಲು ಗ್ಯಾರಂಟಿ ಜಾರಿ ಮಾಡಿತು. ಚುನಾವಣೆ ಆಸೆಗೆ ಯೋಜನೆ ಬಳಕೆ ಮಾಡಬಾರದು. ಇವೆಲ್ಲವುಗಳನ್ನು ವಿರೋಧ ಮಾಡಿ ಏ. ೨ ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಬೆಳಗ್ಗೆ ೧೦ ರಿಂದ ೧೧ ರ ವರೆಗೂ ಹೋರಾಟ ಮಾಡಲಿದ್ದು, ನಂತರ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ ಎಂದರು.ಕನಕಗಿರಿ ಕ್ಷೇತ್ರಕ್ಕೆ ತಂಗಡಗಿ ಕೊಡುಗೆ ಶೂನ್ಯ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಂತ್ರಿಯಾಗಿ ೨ವರ್ಷ ಮೇಲ್ಪಟ್ಟಾಗಿದೆ. ಅವರು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ಕನಿಷ್ಟ ಪಕ್ಷ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದೆನ್ನುವುದನ್ನು ಹೇಳಬೇಕು ಎಂದು ಮಾಜಿ ಶಾಸಕ ಬಸವರಾಜ ದಡೆಸಗೂರು ಪ್ರಶ್ನೆ ಮಾಡಿದರು.
ಶಿವರಾಜ ತಂಗಡಗಿ ಏನೂ ಮಾಡಿಲ್ಲ. ತುಂಗಭದ್ರಾ ಡ್ಯಾಂಗೆ ಮೂಲ ಸೌಕರ್ಯ ಕಲ್ಪಿಸುವುದು, ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರವು ಅನುದಾನ ಕೊಡಬೇಕು. ಇದರಲ್ಲಿ ಬೋರ್ಡ್ ಬರುವುದಿಲ್ಲ. ನೀರು ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಬೋರ್ಡ್ ಜವಾಬ್ದಾರಿಯಾಗಿದೆ ಎಂದರಲ್ಲದೇ, ರೈಸ್ ಪಾರ್ಕ್ ಕನಸು ಎಂದ ತಂಗಡಗಿ ಟೆಕ್ನಾಲಾಜಿ ಪಾರ್ಕನಲ್ಲಿ ಏನೂ ಮಾಡಲಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿ ಇದಕ್ಕೆ ಯೋಜನೆ ರೂಪಿಸಲಾಗಿತ್ತು. ತೋಟಗಾರಿಕೆ ಪಾರ್ಕ್ ಸಹ ನಮ್ಮ ಸರ್ಕಾರದಲ್ಲಿ ಘೋಷಣೆಯಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಹೇಮಲತಾ ನಾಯಕ್, ಡಾ.ಬಸವರಾಜ ಕ್ಯಾವಟರ್, ನಾಗರಾಜ ಬಿಲ್ಗಾರ, ಮಹೇಶ ಹಾದಿಮನಿ ಇತರರಿದ್ದರು.
ಶಾಸಕ ಯತ್ನಾಳ ನಮ್ಮ ನಾಯಕ: ದಡೇಸಗೂರುಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನಮ್ಮ ನಾಯಕರೇ, ಈ ಬಗ್ಗೆ ರಾಜ್ಯದ ನಾಯಕರು ಹೈಕಮಾಂಡ್‌ಗೆ ಮನವರಿಕೆ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಡೇಸಗೂರು ಹೇಳಿದರು.
ಯತ್ನಾಳ ನಮ್ಮ ಪಕ್ಷಕ್ಕೆ ದುಡಿದಿದ್ದಾರೆ. ಏನೋ ಕೆಲವೊಂದು ಕಾರಣಗಳಿಂದ ಅವರನ್ನು ಹೈಕಮಾಂಡ್ ಉಚ್ಚಾಟನೆ ಮಾಡಿದೆ. ಈ ಕುರಿತು ಉಚ್ಚಾಟನೆಯನ್ನು ಮರುಪರಿಶೀಲಿಸುವಂತೆ ಈಗಾಗಲೇ ಕೆಲವು ನಾಯಕರು ಹೇಳಿದ್ದಾರೆ. ಈ ಕುರಿತು ಪಕ್ಷವು ಮುಂದೆ ನಿರ್ಧಾರ ಮಾಡಲಿದೆ. ಆಗಿರುವ ತಪ್ಪು ಸರಿಪಡಿಸಿಕೊಂಡು ಮುಂದೆ ಹೋಗುವ ಕುರಿತು ರಾಜ್ಯ ನಾಯಕರು ಮಾತನಾಡುತ್ತಾರೆ. ನಮ್ಮಲ್ಲಿ ಯಾವುದೇ ಬಣವಿಲ್ಲ. ಪಕ್ಷಕ್ಕೆ ಎಲ್ಲರೂ ದುಡಿಯುತ್ತಿದ್ದಾರೆ. ೨೦೨೮ರ ವೇಳೆಗೆ ನಮ್ಮದೇ ಸರ್ಕಾರವು ಅಧಿಕಾರಕ್ಕೆ ಬರಲಿದೆ. ವಿಜಯೇಂದ್ರ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಿದರು.