26ರಂದು ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಈಡುಗಾಯಿ ಒಡೆದು ಪ್ರತಿಭಟನೆ: ವಾಟಾಳ್‌

KannadaprabhaNewsNetwork |  
Published : Apr 04, 2025, 12:49 AM IST
ಸುದ್ದಿಗೋಷ್ಠಿಯಲ್ಲಿ ವಾಟಾಳ್‌ ನಾಗರಾಜ್‌ ಮಾತನಾಡಿದರು. | Kannada Prabha

ಸಾರಾಂಶ

ಮಹಾದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳು ತಕ್ಷಣ ಜಾರಿಯಾಗಬೇಕು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕೆ ಆದ್ಯತೆ ನೀಡಬೇಕು, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕ ರಚನೆಯಾಗಬೇಕು ಎಂದು ಆಗ್ರಹಿಸಿ ಏ.26ರಂದು ರಾಜ್ಯಾದ್ಯಂತ 2 ಕೋಟಿಗೂ ಅಧಿಕ ಈಡುಗಾಯಿಗಳನ್ನು ಒಡೆಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ನಾಡಿಗಾಗಿ ಕನ್ನಡಕ್ಕಾಗಿ ಕಾಯಿ ಒಡೆಯೋಣ: ಕನ್ನಡಪರ ಹೋರಾಟಗಾರ

ಕನ್ನಡಪ್ರಭ ವಾರ್ತೆ ಉಡುಪಿಮಹಾದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳು ತಕ್ಷಣ ಜಾರಿಯಾಗಬೇಕು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕೆ ಆದ್ಯತೆ ನೀಡಬೇಕು, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕ ರಚನೆಯಾಗಬೇಕು ಎಂದು ಆಗ್ರಹಿಸಿ ಏ.26ರಂದು ರಾಜ್ಯಾದ್ಯಂತ 2 ಕೋಟಿಗೂ ಅಧಿಕ ಈಡುಗಾಯಿಗಳನ್ನು ಒಡೆಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆದು ಕನ್ನಡ ಪರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಇಡೀ ರಾಜ್ಯದಲ್ಲಿ ಈಡುಗಾಯಿ ಚಳುವಳಿ ಮೂಲಕ ಒತ್ತಾಯ ಮಾಡಬೇಕು, ಮಸೀದಿ, ಹೋಟೆಲ್, ದೇವಸ್ಥಾನ, ಅಂಗಡಿ ಎಲ್ಲಿಯಾದರೂ ಕಾಯಿ ಒಡೀರಿ, ತೆಂಗಿನಕಾಯಿ ಎಲ್ಲದಕ್ಕೂ ಬಳಸುವ ವಸ್ತು, ಅದರಲ್ಲೊಂದು ಶಕ್ತಿಯಿದೆ. ತೆಂಗಿನಕಾಯಿಗೆ 50 ರು. ಇದೆ, ಆದರೂ ಪರವಾಗಿಲ್ಲ, ಒಂದು ಈಡುಗಾಯಿ ಒಡೆದರೆ ಆಕಾಶ ಏನು ಬಿದ್ದು ಹೋಗುವುದಿಲ್ಲ. ಎಲ್ಲ ರೀತಿಯ ಹೋರಾಟಕ್ಕೂ ಕನ್ನಡಿಗರು ಸಿದ್ಧ ಇರಬೇಕು. ನಾಡಿಗಾಗಿ ಕನ್ನಡಕ್ಕಾಗಿ ಕಾಯಿ ಒಡೆಯೋಣ ಎಂದವರು ಕರೆ ನೀಡಿದರು.ಸ್ವೀಕರ್‌ ನಡೆ ಸರಿಯಲ್ಲ:

ವಿಧಾನ ಸಭೆಯಿಂದ ವಿಪಕ್ಷದ 18 ಮಂದಿ ಶಾಸಕರನ್ನು 6 ತಿಂಗಳು ಅಮಾನತು ಮಾಡಿದ ಸ್ವೀಕರ್‌ ನಡೆ ಸರಿಯಲ್ಲ. ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಪರ ವಿರೋಧ ಇರುತ್ತದೆ, ವಿಪಕ್ಷ ಸದಸ್ಯರು ಕೂಡ ತಮ್ಮ ಮಿತಿಯನ್ನು ಮೀರಿ ವರ್ತಿಸಿದ್ದಾರೆ, ಅದು ಸರಿಯಲ್ಲ. ಆದರೆ ಸ್ವೀಕರ್ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಶಾಸಕರನ್ನು 6 ತಿಂಗಳು ಹೊರಗೆ ಹಾಕಿದ್ದು ಕೂಡ ಸರಿಯಲ್ಲ. ವಿಪಕ್ಷ ಸದಸ್ಯರು ತಾವು ಕುಳಿತಲ್ಲಿಂದಲೇ ಮಾತಿನ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಬಹುದಿತ್ತಲ್ಲ. ಒಟ್ಟಿನಲ್ಲಿ ಈ ಘಟನೆ ಶಾಸನ ಸಭೆಗೆ ಗೌರವ ತರುವಂತಹದ್ದಲ್ಲ ಎಂದು ವಾಟಾಳ್‌ ವಿಶ್ಲೇಷಿಸಿದರು.ಸುವರ್ಣ ಕಾಲ ಈಗಿಲ್ಲ:

ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಪ್ರಥಮ ಬಾರಿಗೆ ನನ್ನ 25ನೇ ವಯಸ್ಸಿನಲ್ಲಿ ಶಾಸಕನಾಗಿದ್ದೆ. ಅದು ಶಾಸನಸಭೆಯ ಸುವರ್ಣಯುಗವಾಗಿತ್ತು. ಆಗ ಸದನಕ್ಕೆ ಒಂದು ಗಾಂಭೀರ್ಯ, ಘನತೆ ಇತ್ತು. ಕನ್ನಡಪರ, ರೈತರಪರ ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿತ್ತು. ಚರ್ಚೆಗಳು ನಡೆದು ಸದನದ ಸದುಪಯೋಗವಾಗುತ್ತಿತ್ತು. ಆದರೆ ಇಂದು ಅಂತಹ ವಾತಾವರಣ ಇಲ್ಲ, ಬೇರೆ ಅನಾವಶ್ಯಕ ವಿಷಯಗಳನ್ನು ಎಳೆದು ತಂದು ಮಾತನಾಡುತ್ತಾರೆ. ಶಾಸನಸಭೆಯ ಘನತೆ ಎಲ್ಲೆಲ್ಲೋ ಕಳೆದುಹೋಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಬೇಸರಿಸಿದರು.-------------

ರಿಷಭ್‌ ಶೆಟ್ಟಿ ಶಿವಾಜಿ ಪಾತ್ರ ಮಾಡಕೂಡದು!

ರಿಷಭ್‌ ಶೆಟ್ಟಿ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಶಿವಾಜಿ ಪಾತ್ರದಲ್ಲಿ ಅಭಿನಯಿಸಬಾರದು. ಇದರಿಂದ ಅನಗತ್ಯ ತಕರಾರು ಉಂಟಾಗುತ್ತದೆ ಎಂದು ವಾಟಾಳ್‌ ಹೇಳಿದರು.

ರಿಷಭ್‌ ಶೆಟ್ಟಿ ಕಾಂತಾರ ಸಿನಿಮಾ ಮಾಡಿ ಒಳ್ಳೆಯ ಹಣ, ಹೆಸರು, ಗೌರವ ಸಂಪಾದಿಸಿದ್ದಾರೆ. ಶಿವಾಜಿ ಸಿನಿಮಾ ಮಾಡಿದರೆ ಅದೆಲ್ಲ ಕಳೆದುಕೊಳ್ಳುತ್ತಾರೆ. ಯಾಕೆ ಶಿವಾಜಿ ಸಿನಿಮಾದಲ್ಲಿ ನಟಿಸಿ ಅನಗತ್ಯ ತಕರಾರು ಮಾಡಿಕೊಳ್ಳಬೇಕು, ರಾಜ್ಯದಲ್ಲಿ ದೊಡ್ಡದೊಡ್ಡ ಮಹಾನೀಯರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರ ಬಗ್ಗೆ ಸಿನಿಮಾದಲ್ಲಿ ನಟಿಸಲಿ, ಶಿವಾಜಿ ಸಿನಿಮಾದಲ್ಲಿ ನಟಿಸಕೂಡದು ಎಂದು ಈಗಾಗಲೇ ಅವರಿಗೆ ಹೇಳಿದ್ದೇನೆ. ಈ ಬಗ್ಗೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ ಎಂದವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ