ಯೂರಿಯಾ: ಜಗಳೂರು, ಮಾಯಕೊಂಡ ಕ್ಷೇತ್ರಗಳಲ್ಲಿ ಪ್ರತಿಭಟನೆ

KannadaprabhaNewsNetwork |  
Published : Jul 26, 2025, 12:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಯೂರಿಯಾ ಗೊಬ್ಬರ ಅಸಮರ್ಪಕ ಪೂರೈಕೆ ಖಂಡಿಸಿ ಜಗಳೂರು ಪಟ್ಟಣದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ಮುಂದುವರಿದಿದ್ದರೆ, ಇತ್ತ ಮಾಯಕೊಂಡ ಕ್ಷೇತ್ರದ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ರೈತರು ಹಳೇ ಟೈರ್‌ಗಳನ್ನು ಸುಟ್ಟು, ರಸ್ತೆ ತಡೆ ನಡೆಸಿ, ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಕೇಂದ್ರ ಸರ್ಕಾರ, ಕೃಷಿ ಇಲಾಖೆ ವಿರುದ್ಧ ರೈತರ ಹೋರಾಟ: ಅಣಜಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯೂರಿಯಾ ಗೊಬ್ಬರ ಅಸಮರ್ಪಕ ಪೂರೈಕೆ ಖಂಡಿಸಿ ಜಗಳೂರು ಪಟ್ಟಣದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ಮುಂದುವರಿದಿದ್ದರೆ, ಇತ್ತ ಮಾಯಕೊಂಡ ಕ್ಷೇತ್ರದ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ರೈತರು ಹಳೇ ಟೈರ್‌ಗಳನ್ನು ಸುಟ್ಟು, ರಸ್ತೆ ತಡೆ ನಡೆಸಿ, ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಅಣಜಿ ಗ್ರಾಮದ ವೃತ್ತದಲ್ಲಿ 50ಕ್ಕೂ ಹೆಚ್ಚು ರೈತರು ಸಮರ್ಪಕ ಯೂರಿಯಾ ಗೊಬ್ಬರ ಪೂರೈಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಹಳೇ ಟೈರ್‌ಗಳನ್ನು ಸುಟ್ಟು ದಾವಣಗೆರೆ-ಜಗಳೂರು- ಉಚ್ಚಂಗಿದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಬಂದ್ ನಡೆಸಿದರು.

ರೈತ ಮುಖಂಡರು ಮಾತನಾಡಿ, ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ ಇತರೆ ಬೆಳೆಗಳನ್ನು ಬೆಳೆದಿದ್ದೇವೆ. ಸತತವಾಗಿ ದಟ್ಟಮೋಡ ಆವರಿಸಿರುವುದು, ಜಿಟಿಜಿಟಿ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಗೆ ಶೀತಬಾಧೆಯಿಂದ ಹಾಳಾಗುವ ಸ್ಥಿತಿ ತಲುಪುತ್ತಿದೆ. ತಕ್ಷ‍ಣವೇ ಯೂರಿಯಾ ಗೊಬ್ಬರ ಹಾಕದಿದ್ದರೆ ಬೆಳೆಯೇ ಕೈ ತಪ್ಪುವ ಅಪಾಯವಿದೆ ಎಂದರು.

ಮಳೆಯಾಶ್ರಿತ ಅಣಜಿ ಭಾಗದ ರೈತರಿಗೂ ಯೂರಿಯಾ ಗೊಬ್ಬರ ಕೊರತೆಯಾಗಿದೆ. ಜಿಲ್ಲಾಡಳಿತ 2-3 ದಿನದಲ್ಲೇ ಜಿಲ್ಲೆಗೆ ರಸಗೊಬ್ಬರ ಬರಲಿದೆಯೆಂಬ ಭರವಸೆ ನೀಡಿದ್ದರು. ಆದರೆ, ಕೃಷಿ ಇಲಾಖೆಯಿಂದ ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

- - -

(ಬಾಕ್ಸ್‌)

* ಇಂದು 2050 ಮೆಟ್ರಿಕ್ ಟನ್ ಜಿಲ್ಲೆಗೆ: ಜೆಡಿ ಜಿಯಾವುಲ್ಲಾ

- 45 ಕೆಜಿ ಯೂರಿಯಾ ಪ್ಯಾಕೆಟ್‌ಗೆ ₹266 ನಿಗದಿ, ಕೇಂದ್ರ ₹1399 ಸಬ್ಸಿಡಿ

- ರೈತರು ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಸುವುದು ಬೆಳೆಗೆ ಮಾರಕ ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಸದ್ಯ 53,500 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಆದರೆ, ಬೆಳೆಗಳಿಗೆ ರಸಗೊಬ್ಬರದ ಅಭಾವ ತಲೆದೋರಲು ರೈತರು ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾ ಬಳಸುತ್ತಿರುವುದೇ ಕಾರಣ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಸುದ್ದಿಗಾರರಿಗೆ ತಿಳಿಸಿದರು.

15 ಸಾವಿರ ಹೆಕ್ಟೇರಲ್ಲಿ ರಾಗಿ, 500 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಮೆಕ್ಕೆಜೋಳ 45-50 ದಿನಗಳ ಬೆಳೆಯಾಗಿದೆ. ರೈತರು ಬಿತ್ತನೆ ನಡೆಸುವಾಗ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರ ಕೊಡುತ್ತಾರೆ. ಮೆಕ್ಕೆಜೋಳಕ್ಕೆ 1 ಅಥವಾ 2 ಸಲ ಮಾತ್ರ ಮೇಲುಗೊಬ್ಬರ ಕೊಟ್ಟರೆ ಸಾಕು. ರೈತರು ಮಳೆ ಬಂದಾಗ ತೇವಾಂಶ ಇದೆಯೆಂದು 3-3 ಸಲ ಯೂರಿಯಾ ಹಾಕುತ್ತಿದ್ದಾರೆ. ಮೆಕ್ಕೆಜೋಳಕ್ಕೆ ರಸಗೊಬ್ಬರ ಯಥೇಚ್ಛವಾಗಿ ಹಾಕುವುದು ಒಳ್ಳೆಯದಲ್ಲ. ಯೂರಿಯಾ ಹೆಚ್ಚಾದರೆ ಕೀಟಬಾಧೆ ಹೆಚ್ಚಾಗಿ, ಲದ್ದಿ ಹುಳುಗಳ ಬಾಧೆಯೂ ಕಾಣಿಸಿಕೊಳ್ಳುತ್ತದೆ ಎಂದರು.

ರೈತರು ಮಿತವಾಗಿ ಯೂರಿಯಾ ಗೊಬ್ಬರ ಬಳಕೆ ಮಾಡಲು ಗಮನಹರಿಸಬೇಕು. 1 ಹೆಕ್ಟೇರ್‌ಗೆ 1 ಚೀಲದ ಬದಲು 5 ಚೀಲ ಯೂರಿಯಾ ಸುರಿಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ ಏಪ್ರಿಲ್‌ನಿಂದ ಜುಲೈವರೆಗೆ 33 ಸಾವಿರ ಮೆಟ್ರಿಕ್‌ ಟನ್ ಯೂರಿಯಾ ಬೇಕಾಗಿತ್ತು. ಈಗಾಗಲೇ 36 ಸಾವಿರ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಿ, ಮಾರಾಟವೂ ಆಗಿದೆ. ರೈತರು ಯಾರಿಯಾ ಹೆಚ್ಚಾಗಿ ಬಳಸುವುದನ್ನು ಮೊದಲು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಸದ್ಯಕ್ಕೆ 6 ಟನ್‌ ದಾಸ್ತಾನು:

ಜಿಲ್ಲೆಯಲ್ಲಿ ಸದ್ಯಕ್ಕೆ 6 ಸಾವಿರ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದೆ. ಜಗಳೂರು ತಾಲೂಕು ಹಾಗೂ ಮಾಯಕೊಂಡ ಭಾಗದಲ್ಲಿ ರೈತರು ಯೂರಿಯಾ ಹೆಚ್ಚಾಗಿ ಕೇಳುತ್ತಿದ್ದಾರೆ. ಜು.26ಕ್ಕೆ ದಾವಣಗೆರೆ ಜಿಲ್ಲೆಗೆ 2050 ಮೆಟ್ರಿಕ್ ಟನ್ ಯೂರಿಯಾ ಬರಲಿದೆ. 8 ದಿನದವರೆಗೆ ಬೇಡಿಕೆ ಇದ್ದು, ಜಗಳೂರು, ಮಾಯಕೊಂಡ ಭಾಗದಲ್ಲಿ ರಸಗೊಬ್ಬರ ವಿತರಣೆ ಮಾಡುತ್ತೇವೆ. 45 ಕೆಜಿ ಯೂರಿಯಾ ಪ್ಯಾಕೆಟ್‌ಗೆ ₹266 ನಿಗದಿಯಾಗಿದೆ. ಪ್ರತಿ ಚೀಲಕ್ಕೆ ಕೇಂದ್ರ ಸರ್ಕಾರದಿಂದ ₹1399 ಸಬ್ಸಿಡಿ ಸಿಗುತ್ತದೆ. ಕಡಿಮೆ ಬೆಲೆಗೆ ಸಿಗುತ್ತದೆಂದು ರೈತರು ಹೆಚ್ಚಾಗಿ ರಸಗೊಬ್ಬರ ಬಳಸುತ್ತಿರುವುದು ಸಹ ಬೆಳೆ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಸಲಹೆ ನೀಡಿದರು.

- - -

-(ಫೋಟೋ ಬರಲಿದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ