ಜಿಲ್ಲಾ ಮಹಿಳಾ ಸಮಾವೇಶ । ವಿಕಲಚೇತನ ಸಾಧಕ ಮಹಿಳೆಯರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆದೇಶದ ಒಟ್ಟು ಜನಸಂಖ್ಯೆಯ ಶೇ.50ರಷ್ಟಿರುವ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮೆರೆಯುವ ಮೂಲಕ ಪುರುಷರಿಗಿಂತ ಮುಂದಡಿ ಇಡುತ್ತಿರುವುದು ಆಶಾದಾಯಕ ಸಂಗತಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದರು.
ನಗರದ ಗಡಿಯಾರ ಕಂಬ ಸಮೀಪದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಬನಶ್ರೀ ಮಹಿಳಾ ಸಂಸ್ಥೆ, ಪತ್ರಕರ್ತರು ಜಂಟಿಯಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಶಿಕ್ಷಣ, ವೈದ್ಯಕೀಯ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ವಿಜ್ಞಾನ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನ ಸಾಧನೆಯ ಹೆಜ್ಜೆ ಮೂಡಿಸುತ್ತಿದ್ದಾಳೆ ಎಂದರು.ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಇಂದು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದುತ್ತಿರುವುದು ಸಾಧನೆಯ ಸಂಕೇತವಾಗಿದೆ. ಪ್ರತಿ ಮಹಿಳೆಯರಲ್ಲೂ ಶಿಕ್ಷಣದ ಬಗ್ಗೆ ಅರಿವು ಇರಬೇಕು, ನಮ್ಮ ಸುತ್ತಲಿನವರಿಗೆ ಸಹಾಯ ಮಾಡುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವ ಕೆಲಸವನ್ನು ಬನಶ್ರೀ ಮಹಿಳಾ ಸಂಸ್ಥೆಯ ಭೂಮಿಕಾ ಪ್ರಕಾಶ ಮತ್ತು ತಂಡ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಗ್ರಾಪಂ ಸೇರಿದಂತೆ ಯಾವುದೇ ಜನ ಪ್ರತಿನಿಧಿಯಾಗಿ ನೀವು ಆಯ್ಕೆಯಾದರೆ ನಿಮ್ಮ ಗಂಡ, ಅಣ್ಣ-ತಮ್ಮಂದಿರು, ಮಕ್ಕಳು ಹೀಗೆ ಕುಟುಂಬ ಸದಸ್ಯರಿಗೆ ಮೂಗು ತೂರಿಸಲು ಬಿಡಬೇಡಿ. ನೀವು ಆಯ್ಕೆಯಾಗಿರುವ ಸ್ಥಾನಕ್ಕೆ ನ್ಯಾಯ ಕೊಡಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಕಿವಿಮಾತು ಹೇಳಿದರು.ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ವಿಶ್ವದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಆರೋಗ್ಯಕರ ಸ್ಪರ್ಧೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲೇ ಶೇ.80ರಷ್ಟು ಮಹಿಳೆಯರಿದ್ದು, ದೇಶದ ನಿರ್ಮಾತೃಗಳಾಗುತ್ತಿದ್ದಾರೆ. ದೃಢ ನಿರ್ಧಾರ ಇದ್ದು, ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಯಾವುದೂ ಅಸಾಧ್ಯವಲ್ಲ ಎಂದು ಸಲಹೆ ನೀಡಿದರು.
ಬಿಐಇಟಿ ಕಾಲೇಜಿನ ಪ್ರಾಧ್ಯಾಪಕಿ ಎ.ಎಚ್.ಸುಗ್ಗಲಾದೇವಿ ಮಾತನಾಡಿ, ಐಎಎಸ್, ಐಪಿಎಸ್, ಕೆಎಎಸ್ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರೆದು ಉನ್ನತ ಸಾಧನೆ ಮೆರೆಯಬೇಕು. ಹೆಣ್ಣುಮಕ್ಕಳು ಎಂತಹದ್ದೇ ಪರಿಸ್ಥಿತಿ, ಸಂದರ್ಭ ಬಂದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದರು.ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಶಿಕ್ಷಣವು ಆತ್ಮಸ್ಥೈರ್ಯ, ಆತ್ಮವಿಶ್ವಾಸ, ಸ್ವಾಭಿಮಾನ ತಂದುಕೊಡುತ್ತದೆ. ತಾಳ್ಮೆಯು ಮನುಷ್ಯರನ್ನು ಗಟ್ಟಿಗೊಳಿಸುತ್ತದೆ. ಫ್ಯಾಕ್ಟರಿಗೆ ಬೆಂಕಿ ಹಚ್ಚಿದ್ದರೂ ಭೂಮಿಕಾ ಪ್ರಕಾಶ ಎದೆಗುಂದಲಿಲ್ಲ. ಇಂತಹ ಮಹಿಳೆಯರೇ ಸಾಧನೆ ಮಾಡಿ, ಇತರರಿಗೂ ಪ್ರೇರಣೆಯಾಗುತ್ತಾರೆಂಬುದಕ್ಕೆ ನೂರಾರು ಮಹಿಳೆಯರಿಗೆ ಆಸರೆಯಾಗಿರುವುದೇ ಸಾಕ್ಷಿ ಎಂದರು.
ಇದೇ ವೇಳೆ ಹೂವಿನಹಡಗಲಿಯ ವಿಶೇಷಚೇತನ ಸಾಧಕಿ ಸೇರಿದಂತೆ ಸಾಧಕ ಮಹಿಳೆಯರಿಗೆ ಗೌರವಿಸಲಾಯಿತು.ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಹಿರಿಯ ಪತ್ರಕರ್ತೆ ದೇವಿಕಾ ಸುನಿಲ್, ಕೈಮಗ್ಗ ಜವಳಿ ನಿರ್ದೇಶಕ ಶಿವಲಿಂಗಪ್ಪ, ಸಂಚಾರ ಠಾಣೆ ಪಿಎಸ್‌ಐ ಡಿ.ಎಚ್.ನಿರ್ಮಲ, ಹೇಮಲತಾ, ಭಾರತಿ ಹೊಂಗಲ್, ಅಂಜುಂ, ಎನ್‌ಆರ್‌ಎಲ್ ವಿಭಾಗದ ಭೋಜರಾಜ, ಶಿವಕುಮಾರ, ಸಿದ್ದೇಶ, ಹನುಮಂತರಾವ್, ಎಚ್.ಗಂಗಾಧರ, ಮುರುಗೇಂದ್ರಪ್ಪ, ಅಣ್ಣಪ್ಪ, ಜಯಣ್ಣ, ಹೇಮಲತಾ, ಭಾರತಿ ಹೊಂಗಲ್, ಅಂಜುಂ, ಬಸಮ್ಮ ಶಿವಾನಂದ ಇತರರು ಇದ್ದರು.