ಕಾನೂನು ಶಿಕ್ಷಣಕ್ಕೆ ಪ್ರತ್ಯೇಕ ನಿರ್ದೇಶನಾಲಯ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Mar 09, 2025, 01:49 AM IST
ಹುಬ್ಬಳ್ಳಿಯಲ್ಲಿ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಸ್ಕೂಲ್ ಆಫ್ ಲಾ ನೂತನ ಕಟ್ಟಡವನ್ನು ಕಾನೂನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾನೂನು ಶಿಕ್ಷಣವನ್ನು ಎತ್ತರಕ್ಕೆ ಒಯ್ಯಬೇಕಾಗಿದೆ.‌ ಯಾವುದೇ ವೃತ್ತಿ ಹೊಂದಿದರೂ ಕಾನೂನು ಜ್ಞಾನ ಅವಶ್ಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಕಾನೂನು ಶಿಕ್ಷಣಕ್ಕೆ ಪ್ರತ್ಯೇಕ ನಿರ್ದೇಶನಾಲಯ ಮಾಡುವ ಚಿಂತನೆ ನಡೆದಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಇಲ್ಲಿನ ವಿದ್ಯಾನಗರದ ಕೆ.ಎಚ್. ಪಾಟೀಲ ಕಾಲೇಜು ಕ್ಯಾಂಪಸ್‌ನಲ್ಲಿ ಶನಿವಾರ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಸ್ಕೂಲ್ ಆಫ್ ಲಾ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕಾನೂನು ಶಿಕ್ಷಣವನ್ನು ಎತ್ತರಕ್ಕೆ ಒಯ್ಯಬೇಕಾಗಿದೆ.‌ ಯಾವುದೇ ವೃತ್ತಿ ಹೊಂದಿದರೂ ಕಾನೂನು ಜ್ಞಾನ ಅವಶ್ಯ. ಇಂದು ಎಲ್ಲರಿಗೂ ಕಾನೂನು ಶಿಕ್ಷಣ ಅವಶ್ಯವಾಗಿದ್ದು, ಅದಕ್ಕಾಗಿ ವಿಶೇಷ ಮಹತ್ವ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಕಾನೂನು ಹೆಚ್ಚಿನ ಮಹತ್ವ, ಪ್ರಾಧಾನ್ಯತೆ ಪಡೆಯುತ್ತಿದೆ ಎಂದರು.

ವೇಮನ‌ ಸಂಘ ತನ್ನದೆಯಾದ ಮಹತ್ವ ಹೊಂದಿದೆ. ಸಂಘದ ಹಿರಿಯರು ಬಹಳಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅಣಕು ನ್ಯಾಯಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಬಗೆಯಲ್ಲಿ ಸೌಕರ್ಯಗಳೊಂದಿಗೆ ಕಾನೂನು ಕಾಲೇಜು ಆರಂಭಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ, ವಿಶ್ರಾಂತ ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಮಾತನಾಡಿ, ಮಾನವನಿಗೆ ಮಾತ್ರ ನಾಗರಿಕತೆ ಕಾನೂನು ಇದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಹರಿಸಿ ಜ್ಞಾನ ಹೊಂದಿದರೆ ಮಾತ್ರ ಉನ್ನತ ಸ್ಥಾನ ಹೊಂದಲು ಸಾಧ್ಯ. ಕಲ್ಲಾಗಿದ್ದವರನ್ನು ಮೂರ್ತಿಯನ್ನಾಗಿ ರೂಪಿಸಿ ನಿಮ್ಮ ಬೆಳವಣಿಗೆಗೆ ಶಿಕ್ಷಕರೇ ಕಾರಣ ಎಂಬುದನ್ನು ಅರಿತುಕೊಂಡು ಅವರನ್ನು ಗೌರವಿಸುವಂತೆ ಕರೆ ನೀಡಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸಹಕಾರಿ ರಂಗದಲ್ಲಿ ಕ್ರಾಂತಿ ಮಾಡಿದ ಕೆ.ಎಚ್. ಪಾಟೀಲ ಶ್ರೇಷ್ಠ ನಾಯಕರು.‌ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ‌ಜನಸಂಖ್ಯೆಗೆ ಅನುಗುಣವಾಗಿ ವಕೀಲರ ಸಂಖ್ಯೆ 30 ಲಕ್ಷ ಕಡಿಮೆಯಿದೆ. ಸುಪ್ರೀಂ ಕೋರ್ಟ್‌ನಲ್ಲಿ 80 ಲಕ್ಷ ಹಾಗೂ ದೇಶದಲ್ಲಿ 50 ಲಕ್ಷ ಪ್ರಕರಣಗಳು ಬಾಕಿಯಿವೆ. ಆ ನಿಟ್ಟಿನಲ್ಲಿ ಕಾನೂನು ಕಾಲೇಜುಗಳ ಸ್ಥಾಪನೆ ಅವಶ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವಿ.ಜಿ. ಪಾಟೀಲ ಅವರು ಮಹಾತ್ಮ ಗಾಂಧೀಜಿ ಅವರಿಗೆ ಬ್ರಿಟಿಷರು ಪ್ರದಾನ ಮಾಡಿದ ಬ್ಯಾರಿಸ್ಟರ್ ಪದವಿಯ ಪೋಟೋಗ್ರಫಿಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಕೊಡುಗೆಯಾಗಿ ನೀಡಿದರು.

ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎನ್.ಎಚ್. ಕೋನರಡ್ಡಿ, ಕರಾಕಾ ವಿವಿ ಕುಲಪತಿ ಪ್ರೊ. ಸಿ. ಬಸವರಾಜು, ಮೌಲ್ಯಮಾಪನ ಕುಲಸಚಿವೆ ರತ್ನಾ ಭರಮಗೌಡರ, ರಿಜಿಸ್ಟ್ರಾರ್ ಗೀತಾ ಕೌಲಗಿ, ರೆಡ್ಡಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕೆ.ಎಲ್.‌ ಪಾಟೀಲ, ಡಾ. ಶಾರದಾ ನಿರ್ವಾಣಿ, ಮಾಜಿ ಸಂಸದ ಐ.ಜಿ. ಸನದಿ, ವಕೀಲರಾದ ವಿ.ಜಿ. ಪಾಟೀಲ, ಕೆ.ಬಿ. ನಾವಲಗಿಮಠ, ಎಸ್.ಎಸ್. ಮಿಟ್ಟಲಕೋಡ, ವಿನಯ ಮಾಂಗಳೇಕರ, ಎಚ್.ಎಲ್. ವಿಶಾಲ ರಘು, ವಿ.ಡಿ. ಕಾಮರಡ್ಡಿ, ಸಿ.ಎಸ್. ಪಾಟೀಲ, ಆರ್.ಕೆ. ಪಾಟೀಲ ಸೇರಿದಂತೆ ಹಲವರಿದ್ದರು. ಆರ್.ಟಿ. ಜಂಗಲ‌ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''