ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲ್ಲಿ ಬೇಸಿಗೆ ಭೀಕರ ಸ್ವರೂಪ ತಾಳಿದೆ. ನಗರದ ಶೇ. 80 ರಷ್ಟು ಕಡೆ ಅಂತರ್ಜಲ ಬತ್ತಿಹೋಗಿದ್ದು, ಕೊಳವೆ ಬಾವಿಗಳು ಎಲ್ಲವೂ ಬತ್ತಿವೆ. ನಗರ ನೀರಿನ ಈ ಸಮಸ್ಯೆ ಉಲ್ಬಣಿಸಿದೆ. ಇದಕ್ಕೆ ಪರಿಹಾರ ಹುಡುಕಲು ತಕ್ಷಣ 5 ಕೋಟಿ ರು. ಹೆಚ್ಚುವರಿ ಅನುದಾನ ಕಲಬುರಗಿಗೆ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್ ಮನವಿ ಸಲ್ಲಿಸಿ ಆಗ್ರಹಿಸಿದರು.ಗುರುವಾರ ಬೆಂಗಳೂರಲ್ಲಿ ಮುಖ್ಮಂತ್ರಿಗಳ ಭೇಟಿ ಮಾಡಿ ಮನವಿ ನೀಡಿರುವ ಶಾಸಕರು, ಜಿಲ್ಲೆಯಲ್ಲಿ ಬೆಳೆನಾಶ ಭಾರಿ ಪ್ರಮಾಣದಲ್ಲಾಗಿದೆ. ರೈತರು ಬೆಳೆ ವಿಮೆ ಕಂತು ಕಟ್ಟಿದ್ದಾರೆ. ತಕ್ಷಣ ವಿಮೆ ನೋಂದಣಿಯಾದ ಜಿಲ್ಲೆಯ ರೈತರಿಗೆ ತಕ್ಷಣ ನೆರವಿಗೆ ಬರಲು ಮಧ್ಯಂತರ ವಿಮೆ ಪರಿಹಾರ ಹಣ ಬಿಡುಗಡೆಗೂ ಶಾಸಕರು ಆಗ್ರಹಿಸಿದರು.ತಮ್ಮ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಬರಪೀಡಿತ ರೈತರಿಗೆ ಕನಿಷ್ಠ ₹5,000 ಬರ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಈಗಾಗಲೇ ಮೊದಲ ಕಂತಿನ ₹2,500 ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ಚಾಲನೆ ನೀಡಿದ್ದೀರಿ. ಈ ಹಣವನ್ನು ಆದಷ್ಟು ಬೇಗ ರೈತರೆಲ್ಲರ ಖಾತೆಗೆ ಜಮಾ ಆಗುವಂತೆ ತಾವು ಕ್ರಮಗಳನ್ನು ಜರುಗಿಸಬೇಕು. ಇದಲ್ಲದೆ ಪರಿಹಾರದ ಸಂಪೂರ್ಣ 5 ಸಾವಿರ ರು. ಮೊತ್ತ ಆದಷ್ಟು ಬೇಗ ಬೈಗ ರೈತರ ಕೈ ಸೇರುವಂತೆ ಮಾಡಿ ಕಷ್ಟದಲ್ಲಿರುವ ನಾಡಿನ ಅನ್ನದಾತರಿಗೆ ಅನುಕೂಲಮಾಡಿಕೊಡಬೇಕು ಎಂದು ಅಲ್ಲಂಪ್ರಭು ಮನವಿ ಮಾಡಿದರು.