ಕನ್ನಡಪ್ರಭ ವಾರ್ತೆ ಶಿವಮೊಗ್ಗಬಡವರಿಗೆ ಸೂರು ಒದಗಿಸಿಕೊಡುವ ಸಲುವಾಗಿ ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿ ಈಗಾಗಲೇ ಹಣ ನೀಡಿರುವ ಫಲಾನುಭವಿಗಳಿಗೆ ಕೂಡಲೇ ಮನೆಗಳನ್ನು ನಿರ್ಮಿಸಿ ವಿತರಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಇಂದು ಬೃಹತ್ ಜಾಥ: ಸರ್ಕಾರದ ನಿರ್ಲಕ್ಷ್ಯದಿಂದಾಗಿ ತಮಗೆ ಸೂರು ಸಿಗುತ್ತದೆ ಎಂದುಕೊಂಡು ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಮನೆಗಳಿಗಾಗಿ ಸಾರ್ವಜನಿಕರು ಮುಗಂಡ ಹಣ ನೀಡಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ಬಡವರ ಪರ ಸರ್ಕಾರದ ಗಮನಸೆಳೆಯಲು ಆಗ್ರಹಿಸಿ ಜು.18ರಂದು ಬೆಳಗ್ಗೆ 10ಕ್ಕೆ ರಾಮಣ್ಣಶೆಟ್ಟಿ ಪಾರ್ಕ್‍ನಿಂದ ಬೃಹತ್ ಜನಾಗ್ರಹಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
3,000 ಮನೆಗಳಲ್ಲಿ ಕೇವಲ 288 ಮನೆಗಳನ್ನು ಮಾತ್ರ ನೀಡಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಅಂತ್ಯಕ್ಕೆ ಉಳಿದೆಲ್ಲ ಮನೆಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈ ಬಗ್ಗೆ ವಸತಿ ಸಚಿವರನ್ನು ಕೂಡ ಭೇಟಿ ಮಾಡಿದ್ದೆವು. ಅವರು ನಮ್ಮ ಮನವಿಗೆ ಸ್ಪಂದಿಸಿದ್ದರು. ಆದರೆ ಇನ್ನೂ ಮನೆ ವಿತರಣೆಗೆ ಕ್ರಮ ಕೈಗೊಂಡಿಲ್ಲ ಎಂದರು.ಸುಮಾರು 7.77 ಲಕ್ಷ ರು.ಗಳಿಗೆ ಮನೆ ಸಿಕ್ಕಂತಾಗುತ್ತದೆ. ಇದಕ್ಕೆ ಸುಮಾರು 3.80 ರಷ್ಟು ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ಸಿಗುತ್ತದೆ. ಸಾಲಕೂಡ ಬ್ಯಾಂಕಿನಿಂದ ನೀಡಲಾಗುತ್ತದೆ. ಈಗಾಗಲೇ ಮನೆಗಾಗಿ ಫಲಾನುಭವಿಗಳು ಪರಿಶಿಷ್ಟರು 50 ಸಾವಿರ, ಇತರೆಯವರು 80 ಸಾವಿರ ಹಣವನ್ನು ಸಾಲಸೋಲ ಮಾಡಿ ಕಟ್ಟಿದ್ದಾರೆ. ಬಡ್ಡಿ ಕಟ್ಟಲಾಗದೆ, ಸಂಕಷ್ಟದಲ್ಲಿದ್ದಾರೆ. ಇತ್ತ ಮನೆಯೂ ಇಲ್ಲದೆ, ಬಡ್ಡಿ ಕಟ್ಟುವುದು ತಪ್ಪದೆ ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ವಸತಿ ಸಚಿವರು ತಕ್ಷಣವೇ ಇದನ್ನು ಗಮನಿಸಬೇಕು ಎಂದರು.ರಾಮಣ್ಣಶೆಟ್ಟಿ ಪಾರ್ಕ್‍ನಿಂದ ಬೆಳಗ್ಗೆ 10ಕ್ಕೆ ಗಾಂಧಿಬಜಾರ್ ನೆಹರು ರಸ್ತೆಯ ಮೂಲಕ ಜಾಥಾ ಹೊರಟು, ಸೀನಪ್ಪ ಶೆಟ್ಟಿ ವೃತ್ತ(ಗೋಪಿ ವೃತ್ತ)ದಲ್ಲಿ ಸಭೆ ನಡೆಸಲಾಗುವುದು. ಅಲ್ಲಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಜಾಥಾಕ್ಕೆ ಫಲಾನುಭವಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಮಳೆ ಬರುವ ನಿರೀಕ್ಷೆ ಇರುವುದರಿಂದ ಜೊತೆಗೆ ಕೊಡೆಯನ್ನು ತರಬೇಕು ಎಂದು ಮನವಿ ಮಾಡಿದರು.ಶೀಘ್ರವೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿ: ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಶಿವಮೊಗ್ಗ ಮಹಾನಗರಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ವಾರ್ಡ್‍ಗಳ ಹೆಚ್ಚಳ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಈಗಿರುವ ಸ್ಥಿತಿಯಲ್ಲಿಯೇ ಚುನಾವಣೆ ನಡೆಸಬೇಕು ಎದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಎಂ. ಶಂಕರ್, ಸುವರ್ಣ ಶಂಕರ್, ಶಂಕರ್, ಬಾಲು, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಾಧವ್ ಮತ್ತಿತರರು ಇದ್ದರು.ಪರಿಶಿಷ್ಟರನ್ನು ಕಡೆಗಾಣಿಸುತ್ತಿರುವ ಕಾಂಗ್ರೆಸ್ ಸರ್ಕಾರ
ಕಾಂಗ್ರೆಸ್ ನಾಯಕರು ಮಾತ್ತೆತ್ತಿದರೆ ನಾವು ಅಧಿಕಾರಕ್ಕೆ ಬಂದಿರುವುದೇ ದಲಿತರ ಉದ್ದಾರ ಮಾಡುವುದಕ್ಕೆ ಎಂದು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಾರೆ. ಇತ್ತ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟಿರುವ ಹಣವನ್ನು ನುಂಗಿ ನೀರು ಕುಡಿಯುತ್ತಾರೆ. ನೀವು ದಲಿತರನ್ನು ಉದ್ದಾರ ಮಾಡಬೇಡಿ. ಅವರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ ಅಷ್ಟೇ ಸಾಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಟಿ ಬೀಸಿದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟರನ್ನು ಕಡೆಗಾಣಿಸುತ್ತಿದೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂದು ಹೇಳಿಕೊಳ್ಳುವುದನ್ನು ಬಿಡಬೇಕು. ಕಾಂಗ್ರೆಸ್ ಎಂದರೆ ಲೂಟಿಕೋರರ ಒಂದು ಗುಂಪು ಎಂದಾಗಿದೆ. ಇದಕ್ಕೆ ವಾಲ್ಮೀಕಿ ನಿಗಮದಲ್ಲಿ ಆದ ಭ್ರಷ್ಟಚಾರವೇ ಇದಕ್ಕೆ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು. ಇದರ ಜೊತೆಗೆ ಕಟ್ಟಡ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದ ವಿದ್ಯಾರ್ಥಿ ವೇತನ ಹಣವನ್ನು ಸರ್ಕಾರ ದುಪಯೋಗ ಮಾಡಿಕೊಂಡಿದೆ. ಎರಡು ವರ್ಷದಿಂದ ಈ ಹಣವನ್ನೂ ಸರ್ಕಾರ ನೀಡಿಲ್ಲ ಎಂದು ದೂರಿದರು.